ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವೀರಯೋಧ ಪ್ರಾಂಜಲ್‌ಗೆ ನುಡಿನಮನ

ಶಿವಮೊಗ್ಗ: ಕ್ಯಾಪ್ಟನ್ ಪ್ರಾಂಜಲ್ ಸ್ಕೌಟ್ ಆಗಿ, ರೋವರ್ ಆಗಿ ವಿವಿಧ ಹಂತಗಳಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಾಂಜಲ್ ಇಂಜಿನಿಯರ್ ಪದವಿ ಹುದ್ದೆ ಬಿಟ್ಟು ದೇಶಸೇವೆಗಾಗಿ ಜೀವನ ಮುಡಿಪಿಟ್ಟರು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.

ಶಿವಮೊಗ್ಗ ಜಿಲ್ಲಾ ಸ್ಕೌಟ್ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಯೋಧ, ಭಾರತದ ಹೆಮ್ಮೆಯ ಪುತ್ರ, ಕ್ಯಾಪ್ಟನ್ ಎಂ.ವಿ.ಪ್ರಾಂಜಲ್‌ಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕ್ಯಾಪ್ಟನ್ ಪ್ರಾಂಜಲ್ ಅವರು ಕಾಶ್ಮೀರದ ರಜೋರಿ ಜಿಲ್ಲೆಯಲ್ಲಿ ರಾಷ್ಟ್ರ ರಕ್ಷಣೆಯ ಕಾರ್ಯದ ಸಂದರ್ಭದಲ್ಲಿ ಉಗ್ರರ ದಾಳಿಯಲ್ಲಿ ಭಾರತ ಮಾತೆಯ ಮಡಿಲಿಗೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಇಂತಹ ಸೈನಿಕರು ದೇಶದ ಶಕ್ತಿ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಆಗಿದ್ದು, ಸದಾ ದೇಶಪ್ರೇಮ, ಸೇನೆ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದ ಪ್ರಾಂಜಲ್ ಕರ್ನಾಟಕದವರು. ಇಂತಹ ಮಹನೀಯರು ಸದಾ ಅವೀಸ್ಮರಣೀಯ ಎಂದರು.

ಕ್ಯಾಪ್ಟನ್ ಪ್ರಾಂಜಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮತ್ತು ಒಂದು ನಿಮಿಷ ಮೌನ ಪ್ರಾರ್ಥನೆಯೊಂದಿಗೆ ಗೌರವ ಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ವಿ ಅವಲಕ್ಕಿ ಅವರು ಕ್ಯಾಪ್ಟನ್ ಪ್ರಾಂಜಲ್ ಅವರ ಬಾಲ್ಯ ಹಾಗೂ ಸ್ಕೌಟ್ ಮಕ್ಕಳ ಅತ್ಯುನ್ನತ ಪ್ರಶಸ್ತಿ ರಾಷ್ಟ್ರಪತಿ ಪುರಸ್ಕಾರ ಪಡೆದದ್ದು ಹಾಗೂ ಕರ್ನಾಟಕದಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸುವ ಅವಕಾಶವಿದ್ದರೂ ಸೈನ್ಯ ಸೇರಬೇಕು ಎನ್ನುವ ಉತ್ಕಟ ಬಯಕೆಯಿಂದ ಸೈನ್ಯ ಸೇರಿದ್ದರ ಕುರಿತು ಮಾಹಿತಿ ನೀಡಿದರು.

ವಿದ್ಯಾಭ್ಯಾಸ ಪೂರೈಸಿ ಹಂತ ಹಂತವಾಗಿ ಪದೋನ್ನತಿ ಹೊಂದಿ ಕ್ಯಾಪ್ಟನ್ ಆಗಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮೇಜರ್ ಆಗಿ ಬಡ್ತಿ ಹೊಂದುವವರಿದ್ದರು. ಆದರೆ 23ನೇ ನವೆಂಬರ್ 2023 ರಂದು ಉಗ್ರರೊಂದಿಗೆ ನಡೆದ ಸೆಣಸಾಟದಲ್ಲಿ ವೀರ ಯೋಧರು ಹುತಾತ್ಮರಾದರು.

ಇದೇ ಸಂದರ್ಭದಲ್ಲಿ ಹುತಾತ್ಮರಾದ ವೀರ ಯೋಧರಾದ ಕ್ಯಾಪ್ಟನ್ ಶುಭಂ ಗುಪ್ತ, ಲ್ಯಾನ್ಸ್ ನಾಯ್ಕ್ ಸಂಜಯ್ ಬಿಸ್ಟ್, ಹವಾಲ್ದಾರ್ ಅಬ್ದುಲ್ ಮಜೀದ್, ಪಾರಾಟ್ರೂಪರ್ ಶ್ರೀ ಸಚಿನ್ ಲಾರ್ ಬಗ್ಗೆಯೂ ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಹೆಚ್ ಪರಮೇಶ್ವರ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಯಾಸ್, ಹಿರಿಯ ಸ್ಕೌಟರ್ ಕೃಷ್ಣಸ್ವಾಮಿ, ಹಿರಿಯ ಗೈಡರ್ ಮೀನಾಕ್ಷಮ್ಮ, ಮಲ್ಲಿಕಾರ್ಜುನ ಕಾನೂರ್, ದೇವಯ್ಯ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.