ವಿಶ್ವ ಏಡ್ಸ್ ದಿನಾಚರಣೆ : ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು- ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್.

ಶಿವಮೊಗ್ಗ :ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಏಡ್ಸ್ ಕುರಿತಂತೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ತಿಳಿಸಿದರು

ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಮಬ ಕಲ್ಯಾಣ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಬ್ಬಯ್ಯ ನರ್ಸಿಂಗ್ ಕಾಲೇಜ್, ಬಾಪೂಜಿ ನರ್ಸಿಂಗ್ ಕಾಲೇಜ್, ನ್ಯಾಷನಲ್ ಲಾ ಕಾಲೇಜ್, ಎಫ್.ಪಿ.ಎ.ಐ ಶಿವಮೊಗ್ಗ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಶಿವಮೊಗ್ಗ ಇವರ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಏರ್ಪಡಿಸಲಾಗಿದ್ದ “ಸಮುದಾಯಗಳು ಮುನ್ನಡೆಸಲಿ” ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದಲ್ಲಿ ಏಡ್ಸ್ 1986 ರಲ್ಲಿ ಮೊದಲು ಕಾಣಿಸಿಕೊಂಡಿತು. 40 ಲಕ್ಷ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ಇದಕ್ಕೆ ಸೂಕ್ತವಾದ ಔಷಧವನ್ನು ವೈದ್ಯ ವಿಜ್ಞಾನಿಗಳು ಕಂಡುಹಿಡಿಯಲು ಸದಾ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯವಾಗಿ ಜನರಲ್ಲಿ ಏಡ್ಸ್ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಬೇಕು. ಆಗ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ ಎಂದು ಅವರು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್ ಮಾತನಾಡಿ, ಏಡ್ಸ್ ಎಂಬ ಮಾರಕ ರೋಗದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ರೋಗಕ್ಕೆ ಪೀಡಿತರಾದವರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ನಾವು ಯಾವ ರೀತಿ ನೋಡಿಕೊಳ್ಳಬೇಕು ಎಂಬುದು ಈ ಜಾಥಾದ ಮುಖ್ಯ ಉದ್ದೇಶ. ಎ.ಆರ್.ಟಿ ಚಿಕಿತ್ಸೆಯನ್ನು ಪಡೆಯುವುದರಿಂದ ಜೀವನವನ್ನು ಸುಧಾರಿಸಿಕೊಳ್ಳಬಹುದು. 2023 ರೊಳಗೆ ಏಡ್ಸ್‍ನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬೇಕು ಎಂದು ಹೇಳಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ 2023ರ ವೇಳೆಗೆ ಹೆಚ್.ಐ.ವಿ ಮತ್ತು ಏಡ್ಸ್ ಪ್ರಕರಣ ಸೊನ್ನೆ ಆಗಬೇಕು. ಯಾವುದೇ ಸಮಸ್ಯೆಯನ್ನು ಆಲಸ್ಯ ಮಾಡಬಾರದು ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜ್‍ಗಳಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಮೂಡಿಸಬಹುದು. ಜಿಲ್ಲೆಯಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಜಾಗೃತಿ ಮೂಡಿಸಲು 42 ರೆಡ್ ರಿಬ್ಬನ್ ಕ್ಲಬ್‍ಗಳು ಸ್ಥಾಪನೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಕೆಲಸ ನಿರ್ವಹಿಸುತ್ತಿರುವವರಿಗೆ ಸನ್ಮಾನ ಮಾಡಲಾಯಿತು.

ರೋಟರಿ ಅಧ್ಯಕ್ಷರಾದ ವಿಜಯ್ ಕುಮಾರ್ ಮಾತನಾಡಿ, ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಏಡ್ಸ್‍ನ್ನು ತಡೆಗಟ್ಟಬಹುದು. ರಕ್ತದಾನ ಶಿಬಿರಗಳನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವ ಕೆಲಸ ಆಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾವಾಧಿಗಳ ಸಂಘದ ಅಧ್ಯಕ್ಷರಾದ ಬಿ.ಜಿ. ಶಿವಮೂರ್ತಿ, ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ದಿನೇಶ್ ಜಿ.ಸಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರಮೇಶ್ ಸಿ, ಸಿದ್ಧನಗೌಡ, ರವಿಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿಯವರು ಮತ್ತಿತರರು ಉಪಸ್ಥಿತರಿದ್ದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.