ಸ್ವದೇಶೀ ಮೇಳಕ್ಕೆ ವಿದ್ಯುಕ್ತ ಚಾಲನೆ ! ಹೇಗಿತ್ತು ಮೊದಲನೇ ದಿನ ? ಏನೆಲ್ಲಾ ವಿಶೇಷತೆಗಳಿತ್ತು ?
ಶಿವಮೊಗ್ಗ : ನಗರದ ಫ್ರೀಡಂ ಪಾರ್ಕ್ ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಶಿವಮೊಗ್ಗದಲ್ಲಿಆಯೋಜಿಸಿರುವ ಸ್ವದೇಶಿ ಮೇಳಕ್ಕೆ ಬುಧವಾರ ವಿದ್ಯುಕ್ತವಾಗಿ ಚಾಲನೆ ದೊರೆತಿದೆ.
ಬುಧವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಶ್ರೀ ತರಳಬಾಳು ಜಗದ್ಗುರು ಸಿರಿಗೆರೆ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ, ಹಾಗೂ ಸಂಸದ ಬಿ ವೈ ರಾಘವೇಂದ್ರ, ಸ್ವದೇಶಿ ಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯನಿರ್ವಾಹಕರಾದ ಪಟ್ಟಾಬಿರಾಮ್, ಪ್ರೊ ಬಿ ಎಂ ಕುಮಾರಸ್ವಾಮಿ, ಸ್ವದೇಶಿ ಜಾಗರಣ ಮಂಚ್ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟಕ್ ಕೆ ಜಗದೀಶ್ .ಡಾ. ಧನಂಜಯ್ ಸರ್ಜಿ, ಹರ್ಷ ಕಾಮತ್, ಡಿ.ಎಸ್ ಅರುಣ್, ಗಿರೀಶ್ ಕಾರಾಂತ್, ಎಸ್ ದತ್ತಾತ್ರಿ, ಜ್ಯೋತಿ ಪ್ರಕಾಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು
ಮೊದಲನೇ ದಿನದ ಸ್ವದೇಶಿ ಮೇಳಕ್ಕೆ ಶಿವಮೊಗ್ಗದ ಜನತೆಯಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ದೊಡ್ಡ ಸಂಖ್ಯೆಯ ಜನರು ಮೊದಲನೇ ದಿನದ ಸ್ವದೇಶಿ ಮೇಳಕ್ಕೆ ಭಾಗಿಯಾಗಿದ್ದರು. ವೈವಿಧ್ಯಮಯ ದೇಶೀ ಆಹಾರಗಳು, ದೇಶಿ ಆಟಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತರಬೇತಿ ಕಾರ್ಯಕ್ರಮಗಳು ಸೇರಿದಂತೆ 250 ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಭಾಗವಹಿಸಿದ್ದವು..
ಆಹಾರ ಪ್ರಿಯರಿಗಾಗಿ ವಿವಿಧ ಖಾದ್ಯ ಸವಿಯಲು ಅವಕಾಶವಿದೆ. ಮೇಲುಕೋಟೆ ಪುಳಿಯೋಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿಯ ಗಿರಮಿಟ್, ಸಿರಿಧಾನ್ಯಗಳ ರೊಟ್ಟಿ (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿ ಹೀಗೆ ನೂರಾರು ರೀತಿಯ ತರೇವಾರಿ ಆಹಾರ ಪದಾರ್ಥ, ತಿಂಡಿ, ತಿನಿಸು ಲಭ್ಯವಿದೆ.
ಇನ್ನೂ ಡಿಸೆಂಬರ್ 7ರ ಸಂಜೆ ಖ್ಯಾತ ಸಂಗೀತ ಕಲಾವಿದ ಪ್ರವೀಣ್ ಗೋಡ್ಚಿಂಡಿ ಅವರಿಂದ ಬಾನ್ಸುರಿ ಕಾರ್ಯಕ್ರಮ, ಡಿಸೆಂಬರ್ 8ರಂದು ಶ್ವೇತ ಕುಮಾರ ಚರಿತ್ರೆ ಯಕ್ಷಗಾನ, ಡಿಸೆಂಬರ್ 9ರಂದು ವಂದೇ ಮಾತರಂ ನೃತ್ಯ ರೂಪಕ, ಡಿಸೆಂಬರ್ 10 ರಂದು ಖ್ಯಾತ ಜಾದು ಕಲಾವಿದ ಕುದ್ರೊಳ್ಳಿ ಗಣೇಶ್ ಅವರಿಂದ ಜಾದು ಪ್ರದರ್ಶನ ನಡೆಯಲಿದೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply