ಡಿಸೆಂಬರ್ 20ರಂದು ” ಅಮೃತ ಬಿಂದು ” ಎದೆಹಾಲಿನ ಬ್ಯಾಂಕ್ ಉದ್ಘಾಟನೆ ! ಮಧ್ಯಕರ್ನಾಟಕದಲ್ಲೇ ಮೊಟ್ಟ ಮೊದಲ ತಾಯಂದಿರ ಎದೆಹಾಲು ಬ್ಯಾಂಕ್ ಆರಂಭ !

ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಧ್ಯಕರ್ನಾಟಕದ ಮೊದಲ ತಾಯಂದಿರ ಎದೆಹಾಲು ಬ್ಯಾಂಕ್ ಆರಂಭವಾಗುತ್ತಿದೆ.
ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ಸರ್ಜಿ ಆಸ್ಪತ್ರೆಗಳ ಸಹಯೊಗದೊಂದಿಗೆ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಡಿಸೆಂಬರ್ 20ರಂದು ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಉದ್ಘಾಟನೆಯಾಗಲಿದೆ.
ಕೋಡಿಮಠದ ದಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಎದೆಹಾಲಿನ ಬ್ಯಾಂಕ್ ಉದ್ಘಾಟಿಸಲಿದ್ದಾರೆ ಎಂದು ಸರ್ಜಿ ಆಸ್ಪತ್ರೆ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.
ಬೆಂಗಳೂರು, ಬೆಳಗಾವಿ, ಧಾರವಾಡ, ಮಂಗಳೂರಿನಲ್ಲಿ ಮಿಲ್ಕ್ ಬ್ಯಾಂಕ್ ಈಗಾಗಲೇ ಸ್ಥಾಪನೆಗೊಂಡಿದೆ. ಆದರೆ ಮಧ್ಯಕರ್ನಾಟಕ ಹಾಗೂ ಶಿವಮೊಗ್ಗ ಭಾಗದಲ್ಲಿ ಮಿಲ್ಕ್ ಬ್ಯಾಂಕ್ ಕೊರತೆ ಇತ್ತು. ಇದೀಗ ಶಿವಮೊಗ್ಗದಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪನೆಯಾಗುತ್ತಿರುವುದರಿಂದ ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಈ ಭಾಗದಲ್ಲಿನ ನವಜಾತ ಶಿಶುಗಳಿಗೆ ಎದೆಹಾಲಿನ ಕೊರತೆಯಾದಲ್ಲಿ ಸಹಕಾರಿಯಾಗಲಿದೆ. ಈ ಭಾಗದ ನವಜಾತ ಶಿಶುಗಳಿಗೆ ಪ್ರಯೋಜನವಾಗಲೆಂದೇ ರೋಟರಿ ಗ್ಲೋಬಲ್ ಗ್ರ್ಯಾಂಟ್ ಹಾಗೂ ಸರ್ಜಿ ಆಸ್ಪತ್ರೆ ನೆರವಿನೊಂದಿಗೆ ತಾಯಂದಿರ ಎದೆಹಾಲಿನ ಬ್ಯಾಂಕ್ ನ್ನು ಶಿವಮೊಗ್ಗದಲ್ಲಿ ಸ್ಥಾಪಿಸುತ್ತಿದೆ ಎಂದು ಡಾ .ಧನಂಜಯ್ ಸರ್ಜಿ ತಿಳಿಸಿದ್ದಾರೆ.

ಎದೆಹಾಲು ದಾನದಿಂದ ತಾಯಿಗಾಗುವ ಲಾಭಗಳು:
ತಮ್ಮ ಜೀವರಕ್ಷಣೆಗಾಗಿ ಹಾಗೂ ದುರ್ಬಲವಾಗಿರುವ ಶಿಶುಗಳ ಆರೋಗ್ಯ ಸುಧಾರಣೆಗೆ ನೆರವಾಗಲು ಸಹಾಯವಾಗುತ್ತದೆ.
ತಾಯಂದಿರು ನಿಯಮಿತವಾಗಿ ಎದೆಹಾಲು ನೀಡುವುದರಿಂದ ಹೆರಿಗೆ ನಂತರದ ಖಿನ್ನತೆ, ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಇತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ.
ಶಿಶುಗಳನ್ನು ಕಳೆದುಕೊಂಡ ತಾಯಂದಿರು ಎದೆಹಾಲು ದಾನ ಮಾಡುವುದುವು ಚಿಕಿತ್ಸೆಕ ಪ್ರಯೋಜನವಾಗಿದೆ. ಅದು ತಾಯಂದಿರ ದು:ಖ ಮರೆಯಲು ಸಕ್ರಿಯ ಕೆಲಸಗಳಲ್ಲಿ ತೊಡಗಲು ಸಹಾಯವಾಗುತ್ತದೆ.
ಶಿಶುವಿಗೆ ಆಗುವ ಲಾಭಗಳು:
ಎದೆಹಾಲು ಶಿಶುಗಳಿಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವ ಮೂಲಕ ದೇಹದ ಸಮತೋಲನ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾಗಿವೆ.
ಎದೆಹಾಲಿನ ಸೇವನೆ ಶಿಶುಗಳಲ್ಲಿ ದೇಹದ ವಿವಿಧ ಸೋಂಕು ಹಾಗೂ ರೋಗಗಳಿಂದ ರಕ್ಷಿಸುವ ರೋಗನಿರೋಧ ಶಕ್ತಿಯನ್ನು ವೃದ್ಧಿಸುತ್ತದೆ.
ಎದೆಹಾಲು ಕುಡಿಯುವ ಶಿಶುಗಳಲ್ಲಿ ಅಸ್ತಮಾ, ಅಲರ್ಜಿ, ಉಸಿರಾಟದ ಸೋಂಕುಗಳು, ಬಾಲ್ಯದ ರಕ್ತ ಕ್ಯಾನ್ಸರ್ ಹಾಗೂ ಟೈಪ್ -2 ಡಯಾಬಿಟೀಸ್ ಸೇರಿದಂತೆ ವಿವಿಧ ಕಾಯಿಲೆಗಳ ಅಪಾಯ ಕಡಿಮೆ.
ಮಕ್ಕಳಲ್ಲಿ ಹೆಚ್ಚಿನ ಬೌದ್ಧಿಕ ಬೆಳವಣಿಗೆಗೆ ಸಹಕಾರಿ
ಅವಧಿಪೂರ್ವ ಜನಿಸುವ ಶಿಶುಗಳಲ್ಲಿ ಕಾಣಿಸಿಕೊಳ್ಳುವ ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply