ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ – ಕೋಡಿ ಮಠದ ಶ್ರೀ
ಶಿವಮೊಗ್ಗ : ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ ಎಂಬ ಪರಂಪರೆಯನ್ನು ಇಡೀ ಜಗತ್ತೆ ಹೊಂದಿದೆ ಎಂದು ಕೋಡಿಮಠದ ಶ್ರೀ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಹೇಳಿದರು
ಅವರು ಇಂದು ಆರ್. ಎಂ.ಆರ್. ರಸ್ತೆಯಲ್ಲಿರುವ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಇಂದು ಇಂದು ಅಮೃತ ಬಿಂದು ಹೆಸರಿನ ತಾಯಂದಿರ ಎದೆಹಾಲಿನ ಬ್ಯಾಂಕ್ನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಎದೆಹಾಲಿನಿಂದ ಬರುವ ಶಕ್ತಿ ಅಪಾರ ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಇಂದಿನ ಆಧುನಿಕ ಸೌಲಭ್ಯಗಳಿಗೆ ಮಾರುಹೋದ ನಮ್ಮ ಹೆಣ್ಣು ಮಕ್ಕಳು, ಮಕ್ಕಳಿಗೆ ಹಾಲುಣ್ಣಿಸುವಲ್ಲಿ ಯೋಚಿಸುತಿದ್ದಾರೆ. ಜೊತೆಗೆ ವಿವಿಧ ಕಾರಣ ಗಳಿಂದ ಮಗುವಿಗೆ ಎದೆಹಾಲು ಸಿಗದೇ ಹೋಗುತ್ತಿದೆ. ಇದರಿಂದ ಮಗುಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಸರ್ಜಿ ಆಸ್ಪತ್ರೆಯವರು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಯಶಸ್ವಿಯಾಗಲಿ, ಮಕ್ಕಳ ಆರೋಗ್ಯ ಸುಧಾರಿಸಲಿ ಎಂದರು.
ತಾಯಿಯ ಎದೆಹಾಲನ್ನು ಅಮೃತಕ್ಕೆ ಹೋಲಿಸುತ್ತೇವೆ. ಎದೆಹಾಲು ಕೊಡುವುದರಿಂದ 8ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣವನ್ನು ಒಂದು ವರ್ಷದಲ್ಲಿ ಉಳಿಸಬಹುದು ಎಂದು ಮಕ್ಕಳ ತಜ್ಞ ಸರ್ಜಿ ಪೌಂಡೇಷನ್ ಅಧ್ಯಕ್ಷ ಡಾ. ಧನಂಜಯ್ ಸರ್ಜಿ ಹೇಳಿದರು.
ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದುದು. ಅದು ಮಗುವಿನ ಜೀವವನ್ನು ಉಳಿಸುತ್ತದೆ. ವಿಶೇಷವಾಗಿ ಅವಧಿಗೆ ಮುಂಚೆ ಹುಟ್ಟಿದ ಮಗುವಿಗೆ ಮತ್ತು ತೂಕ ಕಡಿಮೆ ಇರುವ ಮಗುವಿಗೆ ಹಾಲಿನ ಅವಶ್ಯಕತೆ ಹೆಚ್ಚಾಗಿರುತ್ತದೆ.
ಅನೇಕ ಸಂದರ್ಭಗಳಲ್ಲಿ ಮಗುವಿಗೆ ತಾಯಿಯ ಹಾಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಗುವಿನ ಬೆಳೆವಣಿಗೆ ಕುಂಠಿತವಾಗುತ್ತದೆ. ನಾನಾ ರೋಗಗಳು ಬಾಧಿಸುತ್ತದೆ. ಬಾಟಲಿ ಹಾಲು ಸೇವಿಸುವ ಹೆಚ್ಚಿನ ಮಕ್ಕಳಲ್ಲಿ ವಾಂತಿ ಬೇಧಿ, ಅತಿಸಾರ, ಹೃದಯದ ಕಾಯಿಲೆ, ಮೆದುಳು ಮತ್ತು ಕಣ್ಣಿನ ಕಾಯಿಲೆ, ಚರ್ಮದ ಕಾಯಿಲೆ ಬರುವ ಸಾಧ್ಯತೆ ಇದೆ. ಎಲ್ಲ ಕಾಯಿಲೆಗಳಿಗೆ ತಾಯಿ ಎದೆಹಾಲು ಅತ್ಯಂತ ಪರಿಣಾಮಕಾರಿಯಾಗಿ ಅಮೃತ ರೂಪದಲ್ಲಿ ಪರಿಣಾಮ ಬೀರುತ್ತದೆ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಆಶಾ ಬೆನಕಪ್ಪ, ಶಿವಮೊಗ್ಗದ ಖ್ಯಾತ ವೈದ್ಯ ಡಾ.ಪಿ. ನಾರಾಯಣ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ರೋಟರಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರೋಟರಿ ಸೆಂಟ್ರಲ್ ಪುರ ಅಧ್ಯಕ್ಷ ಎಚ್.ಪಿ. ಶಿವರಾಜ್, ಜೆ.ಪಿ.ಚಂದ್ರು, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪ್ರಶಾಂತ್ ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply