ಎಲ್ಲರ ಸಹಕಾರದಿಂದ ಜೀವನದಲ್ಲಿ ಯಶಸ್ಸು ಸಾಧ್ಯ – ಡಾ. ಭರತ್
ಶಿವಮೊಗ್ಗ: ಪ್ರತಿಯೊಬ್ಬ ವ್ಯಕ್ತಿಗೂ ಸ್ವಯಂ ಪರಿಶ್ರಮದ ಜತೆಯಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಹಕಾರ, ಪ್ರೋತ್ಸಾಹ ತುಂಬಾ ಮುಖ್ಯ. ಎಲ್ಲರ ಬೆಂಬಲದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ರಾಜ್ಯ ದಂತ ವೈದ್ಯರ ಸಂಘದ ಅಧ್ಯಕ್ಷ ಡಾ. ಭರತ್ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕ, ಸಾಹಸ ಮತ್ತು ಸಂಸ್ಕೃತ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ತಂದೆ, ತಾಯಿ ಆಶಿರ್ವಾದ, ಸ್ನೇಹಿತರು ಹಿತೈಷಿಗಳ ಹಾರೈಕೆಯಿಂದ ರಾಜ್ಯ ದಂತ ವ್ಯದ್ಯಕೀಯ ಸಂಘದ ಅಧ್ಯಕ್ಷ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ತರುಣೋದಯ ಘಟಕ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಯಶಸ್ವಿ ಪುರುಷರ ಹಿಂದೆ ಒಬ್ಬ ಮಹಿಳೆ ಇರುತ್ತಾರೆ ಎನ್ನುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಡಾ. ಲಲಿತಾ, ಅವರ ಬೆಂಬಲದಿಂದ ಮುಂದೆ ರಾಷ್ಟ್ರೀಯ ಮಟ್ಟದಲ್ಲೂ ಅಧ್ಯಕ್ಷತೆ ವಹಿಸುವಂತಾಗಲಿ ಹಾರೈಸಿದರು.
ಅ.ನಾ.ವಿಜಯೇಂದ್ರ ಮಾತನಾಡಿ, ಚಾರಣದಲ್ಲಿ ಎಲ್ಲರೊಂದಿಗೆ ಬೆರೆತು, ತಮಾಷೆಯೊಂದಿಗೆ ಸಮಯ ಹೋಗುವುದೆ ಗೊತ್ತಾಗದಂತೆ, ಕರೆದುಕೊಂಡು ಹೋಗುವುದರಲ್ಲಿ ಭರತ್ ಸಿದ್ದಹಸ್ತರು ಎಂದರು. ಸುರೇಶ್ ಶೆಣೈ ಮಾತನಾಡಿ, ಹಲವಾರು ಸ್ನೇಹಿತರನ್ನು ಕಂಡಿದ್ದೇನೆ. ಆದರೆ ಭರತ್ ಅವರಂತೆ ಜನಾನುರಾಗಿ ಸ್ನೇಹಿತನನ್ನು ಪಡೆದ ನಾವೆ ಧನ್ಯರು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ಕುಮಾರ್ ಮಾತನಾಡಿ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು, ಶಾಲಾ ಮಕ್ಕಳಿಗೆ ಉಚಿತ ದಂತವ್ಯದ್ಯಕೀಯ ಚಿಕಿತ್ಸೆ ನೀಡಿ ಐದು ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಟೂತ್ ಪೇಸ್ಟ್ ಉಚಿತವಾಗಿ ನೀಡಿದ್ದು, ತಮಗೆ ದೊರೆತ ಎಲ್ಲಾ ಹುದ್ದೆಗಳಿಗೆ ನ್ಯಾಯ ದೊರಕಿಸಿ ಯಶಸ್ವಿಯಾದ ವೈದ್ಯರಾಗಿದ್ದರಿಂದ ರಾಜ್ಯ ಅಧ್ಯಕ್ಷರಾಗಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಚೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಪ್ರಾಥಮಿಕ ಸ್ನೇಹಿತರಿಂದ, ಅತ್ಯುನ್ನತ ಸ್ಥಾನದಲ್ಲಿರುವ ಅಧಿಕಾರಿಗಳವರೆಗೆ ಉತ್ತಮ ಸಂವಹನ ಉಳಿಸಿಕೊಂಡಿರುವುದರಿಂದ ಸಿಖ್ಖರ ಪವಿತ್ರಸ್ಥಳ ಗೊಲ್ಡನ್ ಟೆಂಪಲ್ ಗೆ ಬಸ್ಸನ್ನು ದೇವಸ್ಥಾನದ ಬಳಿ ಕರೆದಿಕೊಂಡು ಹೋಗಿ ದರ್ಶನ ಭಾಗ್ಯ ದೊರೆಕಿಸಿದ್ದು ಮರೆಯಲಾಗದ ಕ್ಷಣ ಎಂದು ಹೇಳಿದರು.
ಸಾಹಸ ಮತ್ತು ಸಂಸ್ಕೃತ ಅಕಾಡೆಮಿ ಅಧ್ಯಕ್ಷ ಎ. ಮಂಜುನಾಥ್ ಸ್ವಾಗತಿಸಿದರು. ಸುಮಾರಾಣಿ ಪ್ರಾರ್ಥಿಸಿದರು. ಸುರೇಶ್ ಕುಮಾರ್ ವಂದಿಸಿದರು.
Leave a Reply