ಶಿವಮೊಗ್ಗ ಅತ್ಯಾಧುನಿಕ ರೈಲ್ವೆ ಮೇಲ್ವೇತುವೆ ಕಾಮಗಾರಿಗೆ ಫೈನಲ್ ಟಚ್ ! ಉದ್ಘಾಟನೆ ಯಾವಾಗ ?

ಶಿವಮೊಗ್ಗ ಅತ್ಯಾಧುನಿಕ ರೈಲ್ವೆ ಮೇಲ್ವೇತುವೆ ಕಾಮಗಾರಿಗೆ ಫೈನಲ್ ಟಚ್ ! ಉದ್ಘಾಟನೆ ಯಾವಾಗ ?

ಶಿವಮೊಗ್ಗ : ರಾಜ್ಯದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ರೈಲು ಹಳಿಯ ಮೇಲ್ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲಕ್ಕಾಗಿ ಅತ್ಯಾಧುನಿಕ ಶೈಲಿಯ ವೃತ್ತಾಕಾರದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಕಾಮಗಾರಿ ವೀಕ್ಷಣೆ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಉದ್ಘಾಟನೆಗೆ ದಿನಾಂಕ ನಿಗದಿ ಮಾಡುವ ಕುರಿತು ಪೂರ್ವಭಾವಿ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅತ್ಯಾಧುನಿಕ ವೃತ್ತಾಕಾರದ ಸೇತುವೆ ಕಾಮಗಾರಿಯನ್ನು ಶನಿವಾರ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಸೇತುವೆ ಮೇಲ್ಭಾಗದವರೆಗೆ ತೆರಳಿ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು. ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಅಧಿಕಾರಿಗಳಿಂದ ಕಾಮಗಾರಿಯ ಮಾಹಿತಿ ಪಡೆದುಕೊಂಡರು. ಜೊತೆಗೆ, ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯು 920 ಮೀಟರ್‌ ಉದ್ದದ ರೈಲ್ವೆ ಮೇಲ್ಸೇತುವೆಯಾಗಿದೆ. ವಿದ್ಯಾನಗರದ ಬಳಿ ವೃತ್ತಾಕಾರದಲ್ಲಿದ್ದು, ಬಿ.ಹೆಚ್‌.ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಇನ್ನು ಸೇತುವೆಯ ವೃತ್ತಾಕಾರದ ಭಾಗದಲ್ಲಿ ವಾಯ್ಡ್‌ ಸ್ಲಾಬ್‌ ತಂತ್ರಜ್ಞಾನ ಬಳಸಲಾಗಿದೆ. ಸೇತುವೆಯ ಸ್ಲಾಬ್‌ನ ಒಳಗೆ 800 ಮಿಲಿ ಮೀಟರ್‌ ಸುತ್ತಳತೆಯ 8 ಗಟ್ಟಿಮುಟ್ಟು ಪೈಪ್‌ ಅಳವಡಿಸಲಾಗಿದೆ. ಇದರಿಂದ ಕಾಂಕ್ರಿಟ್‌ ಕಡಿಮೆ ಬಳಕೆಯಾಗಿದ್ದು, ಸೇತುವೆಯ ಭಾರವು ಕಡಿಮೆಯಾಗಿದೆ. ಅಲ್ಲದೆ ಗಟ್ಟಿಮುಟ್ಟಾಗಿಯು ಉಳಿಯಲಿದೆ.

ಈಗ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆಯು 13.5 ಮೀಟರ್‌ ಅಗಲವಾಗಿರಲಿದೆ. ಜೊತೆಗೆ, ಫುಟ್‌ಪಾತ್‌ ಹೊರತು ಪಡಿಸಿ ಕೇವಲ ರಸ್ತೆ ಮಾತ್ರವೇ 9.5 ಮೀಟರ್‌ ಅಗಲವಾಗಿರುತ್ತದೆ. ವೃತ್ತಾಕಾರದ ಭಾಗದಲ್ಲಿ ವಾಹನಗಳು ತಿರುಗಲು ಅನುಕೂಲವಾಗಲು 11.5 ಮೀಟರ್‌ ಅಗಲವಾಗಿ ರಸ್ತೆ ನಿರ್ಮಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ ಗೇಟ್ ನಂ 46ರಲ್ಲಿ ನಿರ್ಮಾಣವಾಗುತ್ತಿದೆ. ಇದನ್ನು 43.90 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವೃತ್ತಕಾರದ ರೈಲ್ವೆ ಮೇಲ್ಸೇತುವೆ ನಿರ್ಮಿಸುತ್ತಿದೆ.

ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಮೇಲ್ಸೇತುವೆ ಉದ್ಘಾಟನೆಯಾದಲ್ಲಿ ಸುಲಭವಾಗಿ ವಾಹನಗಳು ಸಂಚಾರ ಮಾಡಬಹುದು. ಇದರಿಂದ ಆಗಿಂದಾಗ್ಗೆ ಸಂಭವಿಸುವ ರೈಲು ಅಪಘಾತ ಸಂಖ್ಯೆಗೂ ಕಡಿಮೆಯಾಗಲಿವೆ. ರೈಲು ಬರುತ್ತದೆ ಎಂದು ರೈಲ್ವೆ ಗೇಟ್‌ ಹಾಕಿ ವಾಹನಗಳನ್ನು ತಡೆಗಟ್ಟುವ ಪ್ರಮೇಯವೂ ತಗ್ಗಲಿದೆ. ಇನ್ನು ಅತ್ಯಾಧುನಿಕ ಶೈಲಿಯ ತಂತ್ರಜ್ಞಾನ ಬಳಸಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದನ್ನು ಬೆಂಗಳೂರಿನ ಹೆಬ್ಬಾಳ ಫ್ಲೈಓವರ್‌ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಶಿವಮೊಗ್ಗ ನಗರದ ಆಕರ್ಷಣೆಗಳಲ್ಲಿ ಒಂದಾಗಲಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

 


Leave a Reply

Your email address will not be published.