ರಕ್ತದ ಗುಂಪಿನ ಮಾಹಿತಿ ಅವಶ್ಯಕ – ಡಾ. ಗುಡದಪ್ಪ ಕಸಬಿ

ಶಿವಮೊಗ್ಗ: ಪ್ರತಿಯೊಬ್ಬ ವ್ಯಕ್ತಿಯು ವೈಯುಕ್ತಿಕ ದಾಖಲೆ ವಿವರ ಇಟ್ಟುಕೊಳ್ಳುವಂತೆ ರಕ್ತದ ಗುಂಪಿನ ಮಾಹಿತಿಯ ಬಗ್ಗೆ ಅರಿತಿರಬೇಕು. ತುರ್ತು ಸಂದರ್ಭಗಳಲ್ಲಿ ರಕ್ತದ ಮಾಹಿತಿ ಇದ್ದರೆ ಅಗತ್ಯವಿರುವವರಿಗೆ ದಾನ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಪ್ರಯೋಗ ಶಾಲೆ ತಾಂತ್ರಿಕ ಅಧಿಕಾರಿಗಳ ಸಂಘದ ಸಹಕಾರದಲ್ಲಿ ಇಂಟರಾಕ್ಟ್ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಆಯೋಜಿಸಿದ್ದ ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರಕ್ತದ ಗುಂಪುಗಳ ವರ್ಗೀಕರಣ ಮಾಹಿತಿ ಇರುವುದರಿಂದ ಒಬ್ಬರು ಇನ್ನೊಬ್ಬರಿಗೆ ರಕ್ತದಾನ ಮಾಡಲು ಸಹಕಾರಿ ಆಗಿದೆ. ರಕ್ತದಾನ ಮಾಡಲು ಸಹ ರಕ್ತದ ಗುಂಪಿನ ಮಾಹಿತಿ ಅತ್ಯಂತ ಮುಖ್ಯ. ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಹಂತದಲ್ಲಿ ತಜ್ಞರಿಂದ ರಕ್ತದ ಮಾಹಿತಿ ಪಡೆದುಕೊಳ್ಳುವುದು ಅವ್ಯಶಕ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪ್ರಯೋಗಶಾಲೆ ತಾಂತ್ರಿಕ ಅಧಿಕಾರಿಗಳ ಸಂಘದ ಅಧ್ಯಕ್ಷ ಬಸವರಾಜ ಅವರು ರಕ್ತದ ವಿವಿಧ ಗುಂಪು ಹಾಗೂ ರಕ್ತದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವೆಂಕಟೇಶ್, ಪ್ರಶಾಂತ್, ರಾಜು, ಚನ್ನಪ್ಪ, ಸಹ್ಯಾದ್ರಿ ಪ್ರೌಢಶಾಲೆ ಆಡಳಿತಾಧಿಕಾರಿ ಟಿ.ಪಿ.ನಾಗರಾಜ, ಗುರುಮೂರ್ತಿ, ಮುಖ್ಯ ಶಿಕ್ಷಕಿ ಉಮ್ಮಸಲ್ಮಾ, ಕೆ.ಸಿ.ಅನುಶ್ರೀ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.


Leave a Reply

Your email address will not be published.