ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಯುವಕ ಸಾವು ! ಶಿವಮೊಗ್ಗ ಜಿಲ್ಲಾಧಿಕಾರಿ ಹೇಳಿದ್ದೇನು ?
ಶಿವಮೊಗ್ಗ : ಹೋರಿ ಹಬ್ಬ ಅಥವಾ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ (19) ಮೃತಪಟ್ಟ ಯುವಕ.
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದಿತ್ತು. ಹೊರತಿವಿದ ಪರಿಣಾಮ ಪುನೀತ್ ಆಚಾರ್ ತೀವ್ರ ಗಾಯಗೊಂಡಿದ್ದ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕೊಂಡೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಕೊನೆಯುಸಿರಿಳೆದಿದ್ದಾನೆ.
ಈ ಸಂಬಂಧ ಪುನೀತ್ ಆಚಾರ್ ಎಂಬ ಯುವಕನ ತಂದೆ ಗಜೇಂದ್ರ ಆಚಾರ್ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆಯೋಜಕರು ವಿರುದ್ಧ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಹೇಳಿದ್ದೇನು ?
ಹೋರಿ ತಿವಿದು ಯುವಕ ಸಾವು ಪ್ರಕರಣಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ನಾರಾಯಣ ಹೆಗಡೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು.
ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಫೆ 7ರಂದು ಹೋರಿ ಬೆದರಿಸುವ ಸ್ಪರ್ಧೆಯನ್ನು ನಡೆಸುವುದಕ್ಕಾಗಿ ಅನುಮತಿಯನ್ನು ನೀಡಲಾಗಿತ್ತು, ಆದರೆ ಆಯೋಜಕರು ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಯಾವುದೇ ಅಪಘಾತವಾಗದಂತೆ ಎಚ್ಚರಿಕೆ ವಹಿಸಬೇಕಿತ್ತು ಮತ್ತು ಮೆಡಿಕಲ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು, ಆದರೆ ಮೇಲ್ನೋಟಕ್ಕೆ ಮುಂಜಾಗ್ರತ ಕ್ರಮವಾಗಿ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ ಎಂಬುದು ತಿಳಿದು ಬಂದಿದೆ.
ಯುವಕನ ಸಾವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ನಿಯಮಗಳನ್ನ ಫಾಲೋ ಮಾಡಿದ್ದನ್ನು ಆಯೋಜಕರು ವಿಡಿಯೋ ಮಾಡಿ ನಮಗೆ ಸಲ್ಲಿಸಬೇಕಿತ್ತು. ಆದರೆ ನಮಗೆ ಆಯೋಜಕರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಪೊಲೀಸರ ಜೊತೆ ಚರ್ಚಿಸಿ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಮುಂದಿನ ದಿನಗಳಲ್ಲಿ ನಡೆಯುವಂತಹ ಸ್ಪರ್ಧೆಗಳನ್ನು ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply