ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಿವಮೊಗ್ಗದ ಶಿವಾಲಯ ದೇವಸ್ಥಾನದಲ್ಲಿ ಅತಿರುದ್ರಮಹಾಯಾಗ

ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಶಿವಮೊಗ್ಗದ ಶಿವಾಲಯ ದೇವಸ್ಥಾನದಲ್ಲಿ ಅತಿರುದ್ರಮಹಾಯಾಗ

ಶಿವಮೊಗ್ಗ: ಅತಿರುದ್ರ ಮಹಾಯಾಗ ಸಂಚಾಲನಾ ಸಮಿತಿ ಹಾಗೂ ಭಕ್ತ ವೃಂದದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇಶದ ನೆಚ್ಚಿನ ಮಹಾನಾಯಕ ಸನ್ಮಾನ್ಯ ನರೇಂದ್ರ ಮೋದಿ ಜೀಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮಹಾಸಂಕಲ್ಪದೊಂದಿಗೆ ಅತಿರುದ್ರ ಮಹಾಯಾಗವನ್ನು ವಿನೋಬನಗರ ಶಿವಾಲಯ ದೇವಸ್ಥಾನದ ಆವರಣದಲ್ಲಿ ಪ್ರಾರಂಭಿಸಲಾಯಿತು.

ಬೆಳಗ್ಗೆ ಗಂಗಾಪೂಜೆ ನೆರವೇರಿಸಿ, ಗಣಪತಿ,ನಾಂದಿ,ಪುಣ್ಯಾಹ, ಉಮಾಮಹೇಶ್ವರ, ಪಂಚಬ್ರಹ್ಮ ಕಲಶ,ಕದಶ ರುದ್ರ ಕಲಶಾರಾಧನೆ, ನವಗ್ರಹ, ದುರ್ಗಾ ಸಪ್ತಸದಿ ಹಾಗೂ ಪೂಜಾದಿಗಳು ನೆರವೇರಿದವು. ಬಿಳಕಿ ಹಿರೇಮಠದ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ.ಅಭಿನವ ಸಿದ್ದಲಿಂಗೇಶ್ವರ ಶಿವಚಾರ್ಯ ಸ್ವಾಮೀಜಿ, ಕವಲೆದುರ್ಗ ಮಠದ ಶ್ರೀ ರಾಜಗುರು ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ತಂಡವು 121 ಪುರೋಹಿತರು ಮಹಾರುದ್ರ ಮಂತ್ರ ಪಠಣದೊಂದಿಗೆ ಅತಿರುದ್ರ ಮಹಾಯಾಗವನ್ನು ನಡೆಸಿಕೊಟ್ಟರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಸೇರಲು ಫೋಟೋ ಮೇಲೆ ಕ್ಲಿಕ್ ಮಾಡಿ 

ದೇಶದಲ್ಲಿ ಮಳೆ , ಬೆಳೆ ಸಮೃದ್ಧಿಯಾಗಲಿ, ಶಾಂತಿ ನೆಲೆಸಲಿ, ದೇಶದ ನೆಚ್ಚಿನ ಮಹಾನಾಯಕ ಸನ್ಮಾನ್ಯ ನರೇಂದ್ರ ಮೋದಿ ಜೀಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು ಹಾಗೂ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ, ಕೇಂದ್ರದ ಮಂತ್ರಿಯಾಗಬೇಕು ಎಂದು ಪ್ರಾರ್ಥಿಸಲಾಯಿತು.

ಅತಿರುದ್ರಯಾಗದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ. ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ್ರು, ಡಿ.ಎಸ್.ಅರುಣ್, ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಎನ್.ಜೆ.ರಾಜಶೇಖರ್ (ಸುಭಾಷ್), ಸಮಿತಿಯ ಅಧ್ಯಕ್ಷರಾದ ಎಸ್.ಎಸ್.ಜ್ಯೋತಿಪ್ರಕಾಶ್, ಉಪಾಧ್ಯಕ್ಷರಾದ ಎಚ್.ವಿ.ಮಹೇಶ್ವರಪ್ಪ, ಎಸ್.ದತ್ತಾತ್ರಿ, ಜ್ಞಾನೇಶ್ವರ್, ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಚ್. ಮಲ್ಲಿಕಾರ್ಜುನ ಸ್ವಾಮಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಧನಂಜಯ ಸರ್ಜಿ, ಸಹ ಸಂಚಾಲಕರಾದ ಮಹಾಲಿಂಗಯ್ಯ ಶಾಸ್ತ್ರಿ, ನಾಗಯ್ಯ ಶಾಸ್ತ್ರಿಗಳು, ಮಹಾನಗರ ಪಾಲಿಕೆ ಸದಸ್ಯ .ವಿಶ್ವಾಸ್, ಅನಿತಾ ರವಿಶಂಕರ್, ಮೋಹನ್ ರೆಡ್ಡಿ ಮತ್ತಿತರರು ಯಾಗದಲ್ಲಿ ಭಾಗವಹಿಸಿದ್ದರು.

ನಾಳೆ ಬೆಳಗ್ಗೆ 11:30ಕ್ಕೆ ಉಜ್ಜಯಿನಿ ಮಹಾ ಪೀಠದ, ಶ್ರೀ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮೀಜಿ ಮತ್ತು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದ್ದು, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿರುವರು.ಧರ್ಮಸಭೆ ನಡೆಯಲಿದೆ.

ಯಾಗದ ಮಹತ್ವ: “ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ” ಎಂಬಂತೆ ಧರ್ಮವೇ ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವುದರಿಂದ ನಮ್ಮ ಸನಾತನ ಪರಂಪರೆಯಲ್ಲಿ ಧರ್ಮ ರಕ್ಷಣೆಗೆ ಮಹತ್ವವನ್ನು ನೀಡಿದ್ದಾರೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮ ರಕ್ಷಣೆ ಎಂದರೆ ಧರ್ಮಾಚರಣೆ ಮಾಡುವುದು ಎಂದರ್ಥ. ಲೋಕಕಲ್ಯಾಣಾರ್ಥವಾಗಿ ಭಗವಂತನ ಆರಾಧನೆ ಮಾಡುವುದರಿಂದ ಲೋಕಕ್ಕೆ ಒಳಿತಾಗುತ್ತದೆ. ಆ ಉದ್ದೇಶದಿಂದ ಕ್ಷೇತ್ರಗಳಲ್ಲಿ ಲೋಕಕಲ್ಯಾಣಾರ್ಥವಾಗಿ, ಭಗವಂತನ ಪ್ರೀತ್ಯರ್ಥವಾಗಿ ಧರ್ಮ ಕಾರ್ಯಗಳು ಜರುಗುತ್ತವೆ. ಭಗವಂತನ ಆರಾಧನೆಯಲ್ಲಿ ರುದ್ರಾರಾಧನೆಗೆ ವಿಶೇಷವಾದ ಮಹತ್ವವನ್ನು ನೀಡಿದ್ದಾರೆ. ಏಕೆಂದರೆ “ರುಜಂ ದ್ರಾವಯತೀತಿ ರುದ್ರಃ” ಎಂಬಂತೆ ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ಹಾಗೂ ಮನುಷ್ಯನ ದೇಹದಲ್ಲಿರುವ ರೋಗವು ರುದ್ರಾರಾಧನೆಯಿಂದ ಶಮನವಾಗುತ್ತದೆ ಎಂಬುದು ನಂಬಿಕೆ. 

ವೇದೋಕ್ತವಾದ ನಮಕ(ರುದ್ರ)ದಿಂದ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಭಕ್ತಿ, ಶ್ರದ್ಧೆಯಿಂದ ಒಂದು ಬಾರಿ ರುದ್ರಾಭಿಷೇಕ ಮಾಡಿದರೆ ಸಕೃತಾವರ್ತನ ರುದ್ರಾಭಿಷೇಕ, 11 ಬಾರಿ ಮಾಡಿದರೆ ಏಕಾದಶಾವರ್ತನ ರುದ್ರಾಭಿಷೇಕ, 121 ಬಾರಿ ಮಾಡಿದರೆ ಲಘು(ಶತ) ರುದ್ರಾಭಿಷೇಕ, 1331 ಬಾರಿ ಮಾಡಿದರೆ ಮಹಾರುದ್ರಾಭಿಷೇಕ ಮತ್ತು 14641 ಬಾರಿ ಮಾಡಿದರೆ “ಅತಿರುದ್ರಾಭಿಷೇಕವಾಗುವುದು. ಹೀಗೆ ಏಕೋತ್ತರ ವೃದ್ಧಿಯಲ್ಲಿ ಅಭಿಷೇಕ ಮಾಡಿದರೆ ಅಥವಾ ಮಾಡಿಸಿದರೆ ರುದ್ರನು ಪ್ರೀತನಾಗಿ ಸಮಸ್ತ ಲೋಕಕ್ಕೆ ಕಲ್ಯಾಣವನ್ನುಂಟು ಮಾಡುತ್ತಾನೆ..ಅಲ್ಲದೇ “ಶ್ರುತಂ ಹರತಿ ಪಾಪಾನಿ” ಎನ್ನುವ ಹಾಗೆ ರುದ್ರವನ್ನು ಶ್ರವಣ ಮಾಡುವುದರಿಂದ ನಮ್ಮ ಪಾಪಗಳು ದೂರವಾಗುತ್ತವೆ. ಆ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಮಹಾಯಾಗವನ್ನು ನೆರವೇರಿಸಲಾಯಿತು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.