ಲೋಕಸಭೆ ಚುನಾವಣೆ : ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ! ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಕಣಕ್ಕೆ !
ಶಿವಮೊಗ್ಗ : ಲೋಕಸಭಾ ಚುನಾವಣ ದಿನಾಂಕ ಘೋಷಣೆಗೆ ಕೆಲ ದಿನ ಮಾತ್ರ ಬಾಕಿ. ಚುನಾವಣೆ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇಂಡಿಯಾ ಮೈತ್ರಿಯ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳಿಸಿರುವ ಕಾಂಗ್ರೆಸ್ ಇದೀಗ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಚುನಾವಣಾ ಸಮಿತಿಯ ಪವನ್ ಖೇರಾ, ಕೆಸಿ ವೇಣುಗೋಪಾಲ್, ಅಜಯ್ ಮಾಕೇನ್ ಮೊದಲ ಪಟ್ಟಿ ಬಿಡುಗಡೆ ಮಾಡಿದರು. ದೇಶದ 39 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.ರಾಹುಲ್ ಗಾಂಧಿ, ಭೂಪೇಶ್ ಬಾಘೆಲ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆ ಮಾಜಿ ಮುಖ್ಯಮಂತ್ರಿ ಅವರ ಪುತ್ರಿ ಹಾಗೂ ಹಾಲಿ ಸಚಿವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರ ಹೆಸರು ಮೊದಲಪಟ್ಟಿಯಲ್ಲಿ ಘೋಷಣೆಯಾಗಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಕಳೆದ ವರ್ಷ ಗೀತಾ ಶಿವರಾಜ್‌ಕುಮಾರ್ ಜೆಡಿಎಸ್‌ಗೆ ಗುಡ್ ಬೈ ಹೇಳಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ‘ಕೈ’ ಹಿಡಿದಿದ್ದರು. ಅಂದಿನಿಂದಲೂ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್‌ನ ಶಿವಮೊಗ್ಗದ ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ನಿರೀಕ್ಷೆಯಂತೆ ಇಂದು (ಮಾರ್ಚ್ 8) ಕಾಂಗ್ರೆಸ್ ಪ್ರಕಟಿಸಿದ ಪಟ್ಟಿಯಲ್ಲಿ ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಹೆಸರು ಘೋಷಣೆಯಾಗಿದೆ.
ದೊಡ್ಮನೆ ಸೊಸೆ ಗೀತಾ ಶಿವರಾಜ್‌ಕುಮಾರ್‌ಗೆ ರಾಜಕೀಯಕ್ಕೆ ಹೊಸದೇನು ಅಲ್ಲ. ಅವರ ಕುಟುಂಬವೇ ರಾಜಕೀಯದಲ್ಲಿದೆ. ಗೀತಾ ಶಿವರಾಜ್‌ಕುಮಾರ್ ತಂದೆ ಮಾಜಿ ಮುಖ್ಯ ಮಂತ್ರಿ ದಿವಂಗತ ಎಸ್ ಬಂಗಾರಪ್ಪ, ಸಹೋದರರಾದ ಮಧು ಬಂಗಾರಪ್ಪ ಹಾಗೂ ಕುಮಾರ ಬಂಗಾರಪ್ಪ ಇಬ್ಬರೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಧು ಬಂಗಾರಪ್ಪ ಅವರೇ ಗೀತಾ ಶಿವರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಮಧು ಬಂಗಾರಪ್ಪ ಜೆಡಿಎಸ್‌ನಲ್ಲಿ ಇದ್ದಾಗ ಜೆಡಿಎಸ್ ಸೇರ್ಪಡೆಯಾಗಿದ್ದರು. ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ಗೀತಾ ಶಿವರಾಜ್‌ಕುಮಾರ್ ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಕಣಕ್ಕೆ ಇಳಿದಿದ್ದರು. ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್‌ಕುಮಾರ್ ಕಣಕ್ಕೆ ಇಳಿದಿದ್ದರು. ಸ್ವತ: ಶಿವರಾಜ್‌ಕುಮಾರ್ ಬಂದು ಪ್ರಚಾರ ಮಾಡಿದ್ದರೂ, ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿರುದ್ಧ ಪರಾಭಾವಗೊಂಡಿದ್ದರು. ಹೀಗಾಗಿ ಎರಡನೇ ಬಾರಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಈ ಬಾರಿಯಾದರೂ ಶಿವಮೊಗ್ಗ ಕ್ಷೇತ್ರದಿಂದ ಗೆಲ್ಲುತ್ತಾರಾ? ಅನ್ನೋ ಲೆಕ್ಕಾಚಾರ ಶುರುವಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply