ಪುತ್ರನಿಗೆ ತಪ್ಪಿದ ಟಿಕೆಟ್ ! ಯಡಿಯೂರಪ್ಪನವರಿಂದ ನಮಗೆ ಮೋಸ ಈಶ್ವರಪ್ಪ ! ದಶಕಗಳ ಸಮರ ಮತ್ತೆ ಶುರುವಾಗುತ್ತಾ !
ಶಿವಮೊಗ್ಗ : ಈಗಲೂ ನನಗೆ ಬಿಜೆಪಿ ಪಕ್ಷ ತಾಯಿ ಇದ್ದಂತೆ. ಆದರೆ ಪಕ್ಷ ಕೆಲವೊಮ್ಮೆ ದಾರಿ ತಪ್ಪಿ ಹೋಗುತ್ತಿದೆ ಎಂದು ಅನಿಸಿದಾಗ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳ ಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನಾನು ರಾಜಕೀಯ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಪುತ್ರನಿಗೆ ಟಿಕೆಟ್ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನ್ಯ ಯಡಿಯೂರಪ್ಪ ಅವರ ಮನೆಗೆ ಹೋದಾಗ ಕಾಂತೇಶ್ಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು.
ತಮ್ಮ ಪುತ್ರನಿಗೆ ತಾವು ಮೊದಲು ಟಿಕೆಟ್ ಕೇಳಿರಲಿಲ್ಲ. ಸ್ವತಃ ಯಡಿಯೂರಪ್ಪ ಅವರೇ ಹಾವೇರಿಯಲ್ಲಿ ಉದಾಸಿ ತಾವು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ ಬಳಿಕ ಕಾಂತೇಶ್ ಅಲ್ಲಿಂದ ಸ್ಪರ್ಧಿಸಲಿ. ಅವನಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ ಎಂದಿದ್ದರು. ಹೀಗಾಗಿ ಆ ಕ್ಷೇತ್ರ ದಲ್ಲಿ ಓಡಾಡಿ ಪಕ್ಷ ಸಂಘಟಿಸಿದ್ದೇವೆ ಎಂದು ಹೇಳಿದರು.
ಅವರು ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು. ಇನ್ನು, ಕಾಂತೇಶ್ ಪರ ಅಮಿತ್ ಶಾ ಜೊತೆ ಮಾತನಾಡುತ್ತೇನೆ. ಈಶ್ವರಪ್ಪ ನನ್ನ ಜೊತೆ ಬರಲಿ ಎಂಬ ಮಾತೆಗಳೆಲ್ಲ ಬರೀ ನಾಟಕ. ಇದುವರೆಗೆ ನಾಟಕದ ಮಾತುಗಳನ್ನೇ ಆಡಿದರು ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುತ್ರನಿಗೆ ಹಾವೇರಿ ಟಿಕೆಟ್ ದೊರಕದ ಹಿನ್ನೆಲೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಮ್ಮ ಮುಂದಿನ ನಡೆಯ ಕುರಿತು ನಿರ್ಧಾರ ಕೈಗೊಳ್ಳಲು ಮಾ.15ರ ಶುಕ್ರವಾರ ಸಂಜೆ ನಗರದ ಬಾಲರಾಜ ಅರಸ್ ರಸ್ತೆಯಲ್ಲಿರುವ ಬಂಜಾರ ಸಮುದಾಯ ಭವನದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಸಭೆಯಲ್ಲಿ ನಾನು ಭಾಗವಹಿಸುವೆ. ಸಭೆಯಲ್ಲಿ ಬೆಂಬಲಿಗರು, ಹಿತೈಷಿಗಳು ಕೊಡುವ ಸಲಹೆಯನ್ನು ಪರಿಗಣಿಸಿ, ಹಿರಿಯರ ಜೊತೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply