ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ; ಆಯನೂರು ಮಂಜುನಾಥ್ ಗೆ ಟಿಕೆಟ್ !
ಶಿವಮೊಗ್ಗ : ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ವಕ್ತಾರ ಆಯನೂರ್ ಮಂಜುನಾಥ್ ಅವರನ್ನು ಗುರುವಾರ ಹೈಕಮಾಂಡ್ ಅಧಿಕೃತ ಘೋಷಣೆ ಮಾಡಿದೆ.
ಮುಂಬರುವ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ಪಾಳಯದಲ್ಲಿ ಇಬ್ಬರ ಹೆಸರು ಮುಂಚೂಣಿಯಲ್ಲಿತ್ತು.ಸತತವಾಗಿ ಎರಡು ಬಾರಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಎಸ್.ಪಿ ದಿನೇಶ್ ಮತ್ತು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು 2023 ವಿಧಾನಸಭೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಆಯನೂರ್ ಮಂಜುನಾಥ್ ಇಬ್ಬರ ಹೆಸರು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.
ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇಬ್ಬರಿಗೂ ಪತ್ರ ಬರೆದಿದ್ದರು. ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇವೆ. ಹೈಕಮಾಂಡ್ ಯಾರನ್ನ ಸೂಚಿಸುತ್ತೋ ಗೊತ್ತಿಲ್ಲ, ಇಬ್ಬರು ಹೆಚ್ಚು ಪದವೀಧರರನ್ನು ನೋಂದಣಿ ಮಾಡಿಸುವಲ್ಲಿ ಗಮನ ಕೊಡಿ. ಎಂದು ಪತ್ರದ ಮೂಲಕ ತಿಳಿಸಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಅನುಮಾನಕ್ಕೆ ತೆರೆಬಿದ್ದಿದ್ದು. ಕಾಂಗ್ರೆಸ್ ಹೈಕಮಾಂಡ್ ಗುರುವಾರ ಕೆಪಿಸಿಸಿ ವಕ್ತಾರ ಆಯನೂರ್ ಮಂಜುನಾಥ್ ಅವರ ಹೆಸರನ್ನ ಘೋಷಣೆ ಮಾಡಿದೆ.
2023ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ತಮ್ಮ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ಪಕ್ಷಕ್ಕೆ ಸೇರಿ ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು, ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ರಾಜೀನಾಮೆ ಕೊಟ್ಟ ನಂತರ ಕಳೆದ ಒಂದು ವರ್ಷದಿಂದ ಈ ಸ್ಥಾನ ಖಾಲಿಯಾಗಿಯೇ ಉಳಿದಿತ್ತು.
ಇದೀಗ ಲೋಕಸಭಾ ಚುನಾವಣೆ ಮಧ್ಯದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿರುವುದು ಚುನಾವಣಾ ಕಾವು ಮತ್ತಷ್ಟು ಏರಿದಂತಾಗಿದೆ.
ಬಿಜೆಪಿಯಿಂದಲೇ ಕಳೆದ ಬಾರಿ ಸ್ಪರ್ಧಿಸಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಆಯನೂರ್ ಮಂಜುನಾಥ್ ಈಗ ಬಿಜೆಪಿಯ ವಿರುದ್ಧವೇ ತೊಡೆತಟ್ಟಿದ್ದಾರೆ. ನೈರುತ್ಯ ಪದವೀಧರರ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸೋಲನ್ನೇ ಕಾಣದ ಬಿಜೆಪಿಯು ಈ ಬಾರಿ ಸಹ ಅದೇ ವಿಶ್ವಾಸದಲ್ಲಿದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನ ತೊರೆದ ಆಯನೂರ್ ಮಂಜುನಾಥ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಬಿ ಜೆ ಪಿ ಸೇಡು ತೀರಿಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ(ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕು ಮಾತ್ರ) ಜಿಲ್ಲೆಯಲ್ಲಿ ಒಟ್ಟಾರೆ 5 ಲೋಕಸಭ, 30 ವಿಧಾನಸಭಾ ಕ್ಷೇತ್ರ ಹೊಂದಿರುವುದರಿಂದ ಪ್ರಚಾರ ನಡೆಸುವುದು ಸುಲಭದ ಮಾತಲ್ಲ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply