ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ಶಿಕ್ಷಕರಿಗೆ ಬೆತ್ತದೇಟು ! ಶಿಷ್ಯರ ಮುಂದೆ ಮೇಷ್ಟ್ರ ವಿನೂತನ ಪ್ರಯೋಗ !
ಶಿವಮೊಗ್ಗ : ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷಕರು ಪೆಟ್ಟು ಕೊಟ್ಟು ತಿದ್ದಿ ಸರಿ ದಾರಿಗೆ ತರುವಂತಹ ವ್ಯವಸ್ಥೆಯನ್ನು, ನಾವೆಲ್ಲರೂ ನೋಡಿದ್ದೇವೆ ಹಾಗೂ ನಾವೆಲ್ಲರೂ ಕೂಡ ನಮ್ಮ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರಿಂದ ಪೆಟ್ಟು ತಿಂದು ಶಿಕ್ಷೆಯನ್ನು ಅನುಭವಿಸಿರುತ್ತೇವೆ. ತಪ್ಪು ಉತ್ತರ ನೀಡಿದಾಗ ಕಿವಿ ಹಿಂಡುವುದು, ಬಸ್ಕಿ ತೆಗೆಸುವುದು, ತಪ್ಪು ಉತ್ತರ ನೀಡಿದ ಪ್ರಶ್ನೆಯ ಉತ್ತರವನ್ನು ಹತ್ತತ್ತು ಬಾರಿ ಬರೆಸುವುದು, ವಿದ್ಯಾರ್ಥಿಗಳಿಂದಲೇ ಬೆತ್ತ ತರಿಸಿ ಹೊಡೆಯುವುದನ್ನು ನೋಡಿರುತ್ತೇವೆ.
ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತವರು ಕ್ಷೇತ್ರದಲ್ಲೊಬ್ಬರು ಶಿಕ್ಷಕರು ತಮ್ಮ ಶಿಷ್ಯರು ಮಾಡಿದ ತಪ್ಪಿಗೆ, ತಪ್ಪು ಉತ್ತರ ನೀಡಿದಾಗ, ವಿದ್ಯಾರ್ಥಿಗಳಿಗೆ ಪೆಟ್ಟು ನೀಡದೆ, ಅದರ ಸಲುವಾಗಿ ವಿದ್ಯಾರ್ಥಿಗಳಿಂದ ತಾವೇ ಪೆಟ್ಟು ತಿನ್ನುವಂತಹ ವ್ಯವಸ್ಥೆ ಒಂದನ್ನ ಅಳವಡಿಸಿಕೊಂಡಿರುವ ವ್ಯವಸ್ಥೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಾಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೆ
ಹಿಂದೆ ಎಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷಿಸುತ್ತಿದ್ದರು, ಮಕ್ಕಳು ತಪ್ಪು ಮಾಡಿದಾಗ ಪೋಷಕರೇ ಶಿಕ್ಷಕರ ಬಳಿ ಬಂದು ಎರಡೇಟು ಬಿಟ್ಟು ಬುದ್ದಿ ಕಲಿಸಿ ಎಂದು ಶಿಕ್ಷಕರಿಗೆ ಹೇಳುವುದನ್ನು ಕೇಳಿದ್ದೇವೆ, ಆದರೆ ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳನ್ನ ಶಿಕ್ಷಕ ಶಿಕ್ಷಿಸುವುದು ಅಪರಾಧವಾಗ್ತಿದೆ. ಹಾಗಾಗಿ ಹಾಲಂದೂರು ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರೊಬ್ಬರು ವಿನೂತನ ಪ್ರಯೋಗ ಮಾಡಿದ್ದಾರೆ.
ಹೊಸನಗರ ತಾಲೂಕಿನ ಹಾಲಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗೋಪಾಲ್ ಹೆಚ್. ಎಸ್. ಮಕ್ಕಳಿಗೆ ಹೊಡೆಯುವ ತಾಪತ್ರಯನೇ ಬೇಡ ಅಂತಾ ನಾನೇ ಮಕ್ಕಳ ತಪ್ಪಿಗೆ ಏಟು ತಿಂತೀನಿ ಅಂತಾ ವಿದ್ಯಾರ್ಥಿಗಳ ಕೈಗೆ ಬೆತ್ತ ಕೊಡುತ್ತಿದ್ದಾರೆ.
ಶಿಕ್ಷಕ ಗೋಪಾಲ್ ಹೆಚ್ಎಸ್ ರವರು ವಿದ್ಯಾರ್ಥಿಗಳು ತಪ್ಪು ಉತ್ತರ ನೀಡಿದರೆ, ಹೋಂವರ್ಕ್ ಮಾಡದಿದ್ದರೆ, ಒಂದು ವೇಳೆ ಏನಾದರು ತಪ್ಪು ಮಾಡಿದರೆ , ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನ ಕೊಡುವ ಬದಲು, ವಿದ್ಯಾರ್ಥಿಗಳ ಕೈಯಲ್ಲಿ ಬೆತ್ತವನ್ನು ಕೊಟ್ಟು ಏಟು ತಿಂತಾರೆ, ಇವರ ಈ ವಿನೂತನ ಪ್ರಯೋಗ ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರಿದ್ದು.ಮೇಷ್ಟ್ರಿಗೆ ಏಟು ಕೊಡಬೇಕಾಗುತ್ತೆ ಅಂತಾ ಮಕ್ಕಳೆ ತಮ್ಮತಮ್ಮಲ್ಲಿ ತಿಳಿದು ತಪ್ಪನ್ನ ಸರಿಮಾಡಿಕೊಳ್ತಿದ್ದಾರೆ. ಗೊತ್ತಾಗದಿದ್ದರೇ ಮೇಷ್ಟ್ರೇ ಹೇಳಿಕೊಡಿ ಅಂತಾ ಮೊದಲೇ ಕೇಳುತ್ತಿದ್ದಾರೆ. ತಪ್ಪಿಗೂ ಮೊದಲೇ ಸರಿಯಾದುದನ್ನ ಮಾಡುತ್ತಿದ್ದಾರೆ.
ಇಂತಹ ಮಹಾನ್ ಶಿಕ್ಷಕರಿಗೆ ಶಿಷ್ಯರಾದ ನಾವು ಹೊಡೆಯಬೇಕೇ? ಛೆ! ಇದು ಸಾಧ್ಯವಿಲ್ಲ ಎಂದು ಭಾವಿಸಿದ ವಿದ್ಯಾರ್ಥಿಗಳು, ಶಿಕ್ಷಕರು ನಮ್ಮಿಂದ ಪೆಟ್ಟು ತಿನ್ನುವಂತಾಗಬಾರದು ಎಂದು ಶಿಕ್ಷಕರು ಕಲಿಸುವ ಪಾಠವನ್ನು ಗಮನವಿಟ್ಟು ಕೇಳುತ್ತಿದ್ದಾರೆ. ಚೆನ್ನಾಗಿ ಓದಿ ಶಿಕ್ಷಕರು ಕೇಳಿದ ಪ್ರಶ್ನೆಗೆಲ್ಲಾ ಉತ್ತರಿಸುತ್ತಿದ್ದಾರೆ.ಈ ಪ್ರಯೋಗ ಮಕ್ಕಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ತಂದಿದೆ
ಶಿಕ್ಷಕ ಗೋಪಾಲ್ ಹೆಚ್ಎಸ್ ರವರ ಇನ್ನೊಂದು ವಿಶೇಷವೇನೆಂದರೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಈಗ ಓದುತ್ತಿರುವ ವಿದ್ಯಾರ್ಥಿಗಳ ತಂದೆ ತಾಯಿಯವರಿಗೂ ಕೂಡ ಇವರೇ ಅಕ್ಷರ ಕಲಿಸಿದ ಗುರು. 2024ರ ಜೂನ್ ಅಂತ್ಯದಲ್ಲಿ ಗೋಪಾಲ್ ಅವರು ಸೇವಾ ಕಾರ್ಯದಿಂದ ನಿವೃತ್ತಿ ಹೊಂದಲಿದ್ದು. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರೆಲ್ಲರಿಗೂ ಇವರು ಅಚ್ಚುಮೆಚ್ಚು.
ದೇಶದ ಭವ್ಯ ಭವಿಷ್ಯವಾದ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಎಲೆ ಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಇಂತಹ ಶಿಕ್ಷಕರು ನಮ್ಮ ಮಧ್ಯೆ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಹಾಗೂ ಸಂತೋಷದ ವಿಷಯ, ಇಂತಹ ಮಾದರಿ ಶಿಕ್ಷಕರನ್ನು ಸರ್ಕಾರ ಗುರುತಿಸಿ ಗೌರವಿಸಿ ಸನ್ಮಾನಿಸಲಿ ಎಂಬುದೇ ಶಿವಮೊಗ್ಗ ಎಕ್ಸ್ಪ್ರೆಸ್ ನ್ಯೂಸ್ ಚಾನೆಲ್ ನ ಕಳಕಳಿ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply