ಕೆ ಎಸ್ ಈಶ್ವರಪ್ಪ ಸಮಾವೇಶ : ಬಿರಿಯಾನಿಗೆ ಬ್ರೇಕ್ ಹಾಕಿದ ಚುನಾವಣಾ ಅಧಿಕಾರಿಗಳು ! ಉಪವಾಸ ಹೋದ ಕಾರ್ಯಕರ್ತರು !
ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೈಂದೂರಿನಲ್ಲಿ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕರ್ತರಿಗೆ ಚಿಕನ್ ಬಿರಿಯಾನಿ ಮಾಡಿಸಲಾಗಿತ್ತು. ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಬಿರಿಯಾನಿಯನ್ನೇ ಎತ್ತಾಕಿಕೊಂಡು ಹೋಗಿದ್ದಾರೆ.
ಬೈಂದೂರಿನಲ್ಲಿ ಸಮಾವೇಶ ಏರ್ಪಡಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಗೆ ಸಜ್ಜಾಗುತ್ತಿರುವ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಕರ್ತರಿಗೆ ಬಿರಿಯಾನಿ ಊಟ ಬಡಿಸಲು ಮುಂದಾಗಿದ್ದರು. ಇನ್ನು ನೇರವಾಗಿ ಈಶ್ವರಪ್ಪ ಅವರು ಬಿರಿಯಾನಿ ಊಟ ಮಾಡಿಸದಿದ್ದರೂ, ಅವರ ಅಭಿಮಾನಿಗಳು ವ್ಯವಸ್ಥೆ ಮಾಡಿದ್ದರು.
ವಿಚಾರ ತಿಳಿಯುತ್ತಿದ್ದಂತೆ ಫ್ಲೈಯಿಂಗ್ ಸ್ಕ್ವಾಡ್ ಸಮಾವೇಶದ ಮೇಲೆ ದಾಳಿ ನಡೆಸಿ ಬಿರಿಯಾನಿ ಹಂಚದಂತೆ ಎಚ್ಚರಿಕೆ ನೀಡಿದೆ.ಬಿರಿಯಾನಿ ವಿತರಿಸಿದರೆ ಚುನಾವಣೆ ವೆಚ್ಚಕ್ಕೆ ಸೇರ್ಪಡೆಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ಕಾರ್ಯಕ್ರಮಕ್ಕಾಗಿ ತಯಾರಿಸಿದ್ದ ಬಿರಿಯಾನಿ ಅಲ್ಲೇ ಉಳಿದಿದೆ. ನಂತರ ಬಿರಿಯಾನಿಗಾಗಿ ಕಾದು ಕಾದು ಸುಸ್ತಾದ ಕಾರ್ಯಕರ್ತರು, ತಿನ್ನದೇ ವಾಪಸ್ ಹೋಗಿದ್ದು ಕಂಡುಬಂದಿದೆ.
ಬೈಂದೂರಿನಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪನವರ ಹಿಡಿತದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂಬುದು ನನ್ನ ಉದ್ದೇಶ. ನನ್ನದು ಬಿಜೆಪಿಯನ್ನು ವಿರೋಧಿಸುವ ಹೋರಾಟ ಅಲ್ಲ. ಹಿಂದುತ್ವದ ಪರವಾಗಿ ಕುಟುಂಬ ರಾಜಕಾರಣದ ವಿರುದ್ಧವಾಗಿ ನನ್ನ ಹೋರಾಟ. ಪ್ರತಾಪ್ ಸಿಂಹ, ಸಿ.ಟಿ ರವಿ, ಯತ್ನಾಳ್ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಈಶ್ವರಪ್ಪನವರೇ ನಿಮ್ಮ ನಡೆ ಸರಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿಗೆ ಹಿಂದುಳಿದ ವರ್ಗದ ಯುವಕರು ಸಿಗ್ತಾರೆ ಎಂದು ರಾಯಣ್ಣ ಬ್ರಿಗೇಡ್ ಮಾಡಲಾಗಿತ್ತು. ಸ್ವಂತ ದುಡ್ಡಿನಿಂದ ಯುವಕರು ಬಂದು ಕೂಡಲಸಂಗಮದಲ್ಲಿ ಸಮಾವೇಶ ಮಾಡಿದೆವು. ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಅಮಿತ್ ಶಾ ಗೆ ಕಂಪ್ಲೇಂಟ್ ಮಾಡಿದರು. ಕೇಂದ್ರದ ಆರ್ ಎಸ್ ಎಸ್, ಬಿಜೆಪಿ ನಾಯಕರಿಗೆ ಬಿಎಸ್ ವೈ ದೂರು ನೀಡಿದರು. ಹಿರಿಯ ನಾಯಕರು ಕೊಟ್ಟ ಸೂಚನೆಯಂತೆ ಆ ಬ್ರಿಗೇಡ್ ಕಾರ್ಯಕ್ರಮಗಳನ್ನು ನಿಲ್ಲಿಸಿದೆ. ನಾನು ಅಂದು ತೆಗೆದುಕೊಂಡು ನಿರ್ಧಾರ ತಪ್ಪಾ ಎಂದು ಈಗ ನನಗೆ ಅನಿಸುತ್ತಿದೆ ಎಂದು ಹೇಳಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply