ಶಿವಮೊಗ್ಗದಲ್ಲಿ ಕಳೆಗಟ್ಟಿದ ಯುಗಾದಿ ಸಂಭ್ರಮ ! ರೇಟು ಜಾಸ್ತಿಯಾದ್ರೂ ಹೂ, ಹಣ್ಣು ಖರೀದಿ ಭರಾಟೆ ಜೋರು !
ಶಿವಮೊಗ್ಗ : ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಕವಿವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ನವ ಮನ್ವಂತರ ಸ್ವಾಗತಿಸಲು ಮಲೆನಾಡಿನ ಜನತೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು. ಯುಗಾದಿ ಹಬ್ಬಕ್ಕೆ ಸಿದ್ಧತೆಗಳು ಜೋರಾಗಿ ನಡೆದಿದೆ. ನಗರದ ಗಾಂಧಿ ಬಜಾರ್, ಶಿವಪ್ಪ ನಾಯಕ ಹೂವಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಖಾಸಗಿ ಬಸ್ ಸ್ಟಾಂಡ್, ನೆಹರೂ ರಸ್ತೆ, ಬಿ.ಎಚ್.ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಸವಳಂಗ ರಸ್ತೆಯ ಕಡೆಯ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ, ದಿನಸಿ ಖರೀದಿಯಲ್ಲಿ ಜನತೆ ಬಿಜಿಯಾಗಿದ್ದು ಕಂಡು ಬಂತು. ಇನ್ನು ಈ ಬಾರಿ ಬೇಸಿಗೆಯೂ ಆಗಿರುವುದರಿಂದ ಹೂ, ಹಣ್ಣುಗಳ ರೇಟು ಅಧಿಕವಾಗಿದೆ. ಲಗುಬಗೆಯಿಂದ ಹೂ, ಹಣ್ಣು, ತರಕಾರಿಗಳ ಖರೀದಿಯಲ್ಲಿ ತೊಡಗಿರುವ ಗ್ರಾಹಕರು ದರ ಹೆಚ್ಚಳವಾದ್ರೂ ಹೊಸ ವರ್ಷದ ಆಚರಣೆಗೆ ಭಾರೀ ಉತ್ಸುಕರಾಗಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಎರಡು–ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ದರಗಳು ಏರಿಕೆಯಾಗಿವೆ. ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ ಸೇರಿದಂತೆ ಹೂವಿನ ದರಗಳು ಏರಿಕೆಯಾಗಿವೆ. ಹೂ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ದರವನ್ನು ನೋಡದೇ ಖರೀದಿಯಲ್ಲಿ ತೊಡಗಿದ್ದಾರೆ. ಇನ್ನೂ ನಗರದ ಪ್ರಮುಖ ವೃತ್ತಗಳಲ್ಲಿ, ಪ್ರಮುಖ ರಸ್ತೆಗಳ ಬದಿಯಲ್ಲಿ ಮಾವಿನ ಎಲೆ, ಬೇವಿನ ಎಲೆಯ ರಾಶಿಗಳು, ಬಾಳೆಕಂದು, ಹೂವು ಹಣ್ಣು ಮುಂತಾದ ವಸ್ತುಗಳ ಮಾರಾಟದ ಜೊತೆಗೆ ಖರೀದಿಯು ಭರ್ಜರಿಯಾಗಿ ಸಾಗಿದೆ.
‘ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಖಾದ್ಯಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಶಿವಮೊಗ್ಗದ ಸುತ್ತಮುತ್ತ ಹೊಸ ತೊಡಕು ಸಂಭ್ರಮದಿಂದ ನಡೆಯುತ್ತದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply