ಶಿವಮೊಗ್ಗ ಜಿಲ್ಲೆಯಾದ್ಯಂತ ಯುಗಾದಿ ಚಂದ್ರದರ್ಶನ ! ಚಂದ್ರ ದರ್ಶನದ ಮಹತ್ವ ಏನು ?
ಶಿವಮೊಗ್ಗ : ಯುಗಾದಿಯ ಅಂಗವಾಗಿ ಚಂದ್ರನನ್ನು ನೋಡುವ ಸಂಪ್ರದಾಯವಿದೆ. ಶಿವಮೊಗ್ಗ ನಗರದ ಹಲವೆಡೆ ಇಂದು ಚಂದ್ರ ದರ್ಶನವಾಗಿದ್ದು. ಮಲೆನಾಡಿನ ಜನತೆಯ ಮನದಲ್ಲಿ ಸಂಭ್ರಮ ಮನೆ ಮಾಡಿದೆ.
ಸಂಜೆಯಾಗುತ್ತಲೆ ಕುಟುಂಬದ ಸದಸ್ಯರೆಲ್ಲರೂ ಮನೆಯಿಂದ ಹೊರಬಂದು ಆಗಸದೆಡೆಗೆ ಮುಖ ಮಾಡಿ ಗುಂಪು ಗುಂಪಾಗಿ ನಿಂತು ಆಕಾಶ ಕಡೆ ಬೆರಳು ತೋರಿಸಿ ಚಂದ್ರ ನನ್ನ ತೋರಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ರಸ್ತೆಗಳು, ಕ್ರೀಡಾಂಗಣ, ಬಯಲು ಪ್ರದೇಶ, ಮನೆಯ ಟೆರೇಸ್ ಮೇಲೆ ನಿಂತು ಚಂದ್ರ ದರ್ಶನ ಪಡೆದು ಚಂದಿರನನ್ನು ಕಣ್ತುಂಬಿಕೊಂಡಿದ್ದಾರೆ. ಚಂದ್ರನ ದರ್ಶನ ಪಡೆಯುತ್ತಿದ್ದ ಹಾಗೆ ಕೈ ಮುಗಿದು ಭಕ್ತಯಿಂದ ಪ್ರಾರ್ಥನೆ ಸಲ್ಲಿಸಿದರು.
ಬೇವು ಬೆಲ್ಲ ಹಂಚಿ ಹಿರಿಯರ ಆಶೀರ್ವಾದ ಪಡೆಯುವುದು ಚಂದ್ರಮಾನ ಯುಗಾದಿಯ ಸಂಪ್ರದಾಯವಾಗಿದ್ದು, ಇಂದು ಚಂದ್ರ ದರ್ಶನವಾದ ಹಿನ್ನೆಲೆ ಹಲವೆಡೆ ಈ ದೃಶ್ಯಗಳು ಕಂಡುಬಂದವು.
ಆಕಾಶದತ್ತ ಭಕ್ತಿಯಿಂದ ಕೈಮುಗಿದರು. ಕೆಲವರು ಊದುಬತ್ತಿ ಬೆಳಗಿದರೆ ಮತ್ತೆ ಕೆಲವರು ಕರ್ಪೂರದಾರತಿ ಮಾಡಿದರು. ಮಕ್ಕಳು, ಯುವಕ, ಯುವತಿಯರು ಮೊಬೈಲ್ ಹಿಡಿದು ಸೆಲ್ಪಿ ಪಡೆದುಕೊಂಡರು. ಚಂದ್ರನ ದರ್ಶನವಾಗುತ್ತಿದ್ದಂತೆ ಏನೋ ಧನ್ಯತಾ ಭಾವ. ಈ ವರ್ಷ ಎಲ್ಲವೂ ಒಳಿತಾಗಲಿ ಎನ್ನುವ ಪ್ರಾರ್ಥನೆ ಮಾಡಿದರು.
ಚಂದ್ರ ದರ್ಶನದ ಮಹತ್ವ ಏನು ?
ಹಿಂದೂ ಧರ್ಮದ ಪ್ರಕಾರ, ಚಂದ್ರ ನವಗ್ರಹಗಳಲ್ಲಿ ಒಬ್ಬ, ಶುದ್ಧತೆ, ಬುದ್ಧಿವಂತಿಕೆ ಹಾಗೂ ಉತ್ತಮ ನಡವಳಿಕೆಯ ಸಂಕೇತವಾಗಿ ಆತನನ್ನು ಬಿಂಬಿಸಲಾಗುತ್ತದೆ. ಅಂತಹ ಚಂದ್ರನನ್ನು ವರ್ಷದ ಆದಿ ಪರ್ವವಾದ ಯುಗಾದಿಯಂದು ದರ್ಶನ ಪಡೆದರೆ, ಇಡೀ ವರ್ಷವೆಲ್ಲಾ ಸುಖ-ಸಂತೋಷದಿಂದ ಇರುತ್ತಾರೆ ಎಂಬ ನಂಬಿಕೆ ಇದೆ. ಇದೇ ನಂಬಿಕೆಯಿಂದ ಹಿಂದಿನಿಂದಲೂ ಯುಗಾದಿ ಚಂದ್ರನನ್ನು ನೋಡುವುದು ವಾಡಿಕೆಯಾಗಿದೆ. ಯುಗಾದಿಯ ಹಿಂದಿನ ದಿನ ಅಮಾವಾಸ್ಯೆಯಲ್ಲಿ ಬರುವುದರಿಂದ ಮರು ದಿನ ಚಂದ್ರನ ದರ್ಶನಕ್ಕೆ ಪುಣ್ಯ ಮಾಡಿರಬೇಕು ಎಂಬ ನಂಬಿಕೆ ಇದೆ.
ಯುಗಾದಿ ದಿನದಂದು ಕಾಣಿಸುವ ಚಂದ್ರನನ್ನು ಆಧರಿಸಿ ಹಿಂದೆ ಆ ವರ್ಷದ ಮಳೆ-ಬೆಳೆ, ರೋಗ-ರುಜಿನಗಳು, ಏಳು-ಬೀಳುಗಳ ಬಗ್ಗೆ ಚಿಂತನೆ ಮಾಡುತ್ತಿದ್ದರು. ಯುಗಾದಿಯಂದು ಚಂದ್ರನು ಅತ್ಯಂತ ಚಿಕ್ಕದಾಗಿ ಸಣ್ಣ ಗೆರೆಯ ರೀತಿಯಲ್ಲಿ ಕಾಣ ಸಿಗುತ್ತಾನೆ. ಇದನ್ನು ಆಧರಿಸಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತಿದ್ದರು. ಅದಕ್ಕೆಂದೇ ಹೊಸ ವರ್ಷದ ಪಂಚಾಂಗವನ್ನು ಪಠಿಸಿ, ಅನಂತರ ಚಂದ್ರ ದರ್ಶನವನ್ನು ಮಾಡಲಾಗುತ್ತದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply