ಶಿವಮೊಗ್ಗ : ಮೇ 2ರಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ನಗರದ ಫ್ರೀಡಂ ಪಾರ್ಕ್ನಲ್ಲಿ ಗೀತಾಶಿವರಾಜ್ಕುಮಾರ್ ಬೃಹತ್ ಸಮಾವೇಶದಲ್ಲಿ ಬಹಿರಂಗ ಪ್ರಚಾರ ಮಾಡಲಿದ್ದಾರೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧುಬಂಗಾರಪ್ಪ ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಕೂಡ ಒಳ್ಳೆಯ ವಾತಾವರಣ ಕಂಡು ಬಂದಿದ್ದು, ಜನರ ಉಪಚಾರಕ್ಕೆ ನಾನು ತುಂಬಾ ಋಣಿಯಾಗಿದ್ದೇನೆ. ಈ ರೀತಿಯ ಬದಲಾವಣೆಯನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಎಲ್ಲಾ ವರ್ಗದ ಜನ ಅಭಿನಂದಿಸುತ್ತಿದ್ದಾರೆ. ಮತ ಕೇಳಲು ಮನೆಗೆ ಹೋದರಿಗೆ ಮನೆ ಒಳಗೆ ಕರೆದು ಚಹಾ, ನೀರು, ನೀಡುತ್ತಿದ್ದಾರೆ. ಇವರ ಪ್ರೀತಿಗೆ ಹೃದಯ ತುಂಬಿ ಬರುತ್ತಿದೆ ಎಂದರು.
ಈಗಾಗಲೇ ಗ್ಯಾರಂಟಿ ಕಾರ್ಡ್ಗಳ ವಿತರಣೆ ಕಾರ್ಯ ಮುಗಿದಿದೆ. ೩ನೇ ಹಂತದ ಪ್ರಚಾರಕ್ಕೆ ಕಾಲಿಟ್ಟಿದ್ದೇವೆ. ಬಿಜೆಪಿ ಪ್ರಚಾರಕ್ಕೆ ಹೋಲಿಸಿದರೆ ನಮ್ಮ ಪ್ರಚಾರವೇ ಜಾಸ್ತಿ ಇದೆ. ಮೇ 2ರಂದು ಮಧ್ಯಾಹ್ನ 12 ರಿಂದ 1.30 ರವರೆಗೆ ರಾಹುಲ್ ಗಾಂಧಿಯವರು ಸಮಯ ನೀಡಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಲಿದ್ದಾರೆ ಎಂದರು.ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ ಮತ್ತು ಶಿವಮೊಗ್ಗ ನಗರ ನಾಲ್ಕು ತಾಲ್ಲೂಕುಗಳ ಮತದಾರರು ಆಗಮಿಸಲಿದ್ದಾರೆ ಎಂದು ಹೇಳಿದರು
ಸುದ್ಧಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಪ್ರಮುಖರಾದ ಸುವರ್ಣ ನಾಗರಾಜ್, ಚಿನ್ನಪ್ಪ, ಶಮಂತ್, ಜಿತೇಂದ್ರ ಸೇರಿದಂತೆ ಹಲವರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply