ಮತ ಏಣಿಕೆಗೆ ಸಕಲ ಸಿದ್ಧತೆ  – ಜಿಲ್ಲಾಧಿಕಾರಿ ಗುರುದತ್  ಹೆಗಡೆ

ಶಿವಮೊಗ್ಗ: ಲೋಕಸಭಾ ಚುನಾವಣೆಯ ಮತ ಎಣಿಕೆ ಜೂನ್ 4ರಂದು ನಡೆಯಲಿದೆ. ಆಯೋಗದ ನಿಯಮಾನುಸಾರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಅಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬೆಳಿಗ್ಗೆ 8ಕ್ಕೆ ಆರಂಭಿಸಲಾಗುತ್ತದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 17,52,885 ಮತದಾರರು ಇದ್ದು ಒಟ್ಟು 13,72,949 ಮತಗಳು ಚಲಾವಣೆಯಾಗಿವೆ. ಮತ ಎಣಿಕೆಗೆ ಒಟ್ಟು 523 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರಿಗೆ ಜೂನ್ 4ರಂದು ಬೆಳಿಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಬರಲು ತಿಳಿಸಲಾಗಿದೆ. ಬೆಳಿಗ್ಗೆ 7ಕ್ಕೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲು ಕ್ರಮ ವಹಿಸುವ ಮಾಹಿತಿ ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳು ಇರುತ್ತವೆ. ಮತ ಎಣಿಕೆ ಕೌಂಟರ್‌ಗಳಿಗೆ ಅಭ್ಯರ್ಥಿಗಳು, ಚುನಾವಣಾ ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ ಎಂದು ಮಾಹಿತಿ ತಿಳಿಸಿದರು. 

ಅಂಚೆ ಮತಪತ್ರಗಳ ಎಣಿಕೆಯನ್ನು ಬೆಳಿಗ್ಗೆ 8ಕ್ಕೆ ಚುನಾವಣಾಧಿಕಾರಿಯ ಮೇಜಿನಲ್ಲಿ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಮತ್ತು ಒಬ್ಬರು ಮೈಕ್ರೋ ಅಬ್ಸರ್ವರ್ ನೇಮಕಗೊಳಿಸಿ ತರಬೇತಿ ನೀಡಲಾಗಿದೆ. ಇವಿಎಂ ಮತ ಎಣಿಕೆ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿ.ವಿ ಪ್ಯಾಟ್‍ಗಳ ಎಣಿಕೆಯನ್ನು ಒಂದಾದ ಮೇಲೆ ಒಂದರಂತೆ ಮಾಡಲಾಗುತ್ತದೆ. ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್ ಬಳಕೆಗೆ ಅವಕಾಶವಿರುವುದಿಲ್ಲ ಎಂದರು. 

ಮತ ಎಣಿಕೆ ಆವರಣದ ಸುತ್ತಮುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ವಿಧಾನಸಭಾ ಕ್ಷೇತ್ರವಾರು 18ರಿಂದ 21 ಸುತ್ತಿನ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ಸುತ್ತಿನ ಫಲಿತಾಂಶವನ್ನು ಚುನಾವಣಾ ವೀಕ್ಷಕರು ಸಹಿ ಹಾಕಿದ ನಂತರ ಮಾಧ್ಯಮ ಹಾಗೂ ಮೈಕ್ ಮೂಲಕ ತಿಳಿಸಲಾಗುತ್ತದೆ ಎಂದರು.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಲೋಕಸಭಾ ಚುನಾವಣೆ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಹ್ಯಾದ್ರಿ ಕಾಲೇಜಿನ ಮುಖ್ಯರಸ್ತೆ, ಎಂಆರ್‌ಎಸ್ ವೃತ್ತದಲ್ಲಿ ಈ ವೇಳೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನ ಸವಾರರಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ. 1000ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ, ಹೋಂ ಗಾರ್ಡ್, ಕೆಎಸ್‍ಆರ್‌ಪಿಇ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.