ಶಿವಮೊಗ್ಗದಲ್ಲಿ ಒಂದು ಮಟನ್ ಪೀಸ್‌ಗಾಗಿ ಗ್ರಾಹಕನ ಬುರುಡೆ ಬಿಚ್ಚಿದ ಅಪ್ರಾಪ್ತ ಯುವಕ !

ಶಿವಮೊಗ್ಗ : ಬೆಳಗ್ಗೆ ಮಟನ್ ಶಾಪ್‌ಗೆ ಹೋಗಿದ್ದ ಗ್ರಾಹಕ ತಾನು ಖರೀದಿ ಮಾಡಿದ ಮಟನ್‌ನಿಂದ ಒಂದೆರಡು ಪೀಸ್ ಹೆಚ್ಚಾಗಿ ಹಾಕುವಂತೆ ಗಲಾಟೆ ಮಾಡಿದ್ದಾನೆ. ಆದರೆ, ಗ್ರಾಹಕನ ಗಲಾಟೆಯಿಂದ ರೋಸಿ ಹೋಗಿದ್ದ ಅಂಗಡಿಯಲ್ಲಿ ಕೆಲಸ ಮಾಡುವ ಅಪ್ರಾಪ್ತ ಬಾಲಕ ಗ್ರಾಹಕನ ತಲೆಗೆ ಮಟನ್ ಕತ್ತರಿಸುವ ಖತ್ತಿಯಿಂದ ಹಲ್ಲೆ ಮಾಡಿದ್ದಾನೆ 

ಹೌದು, ಆಪ್ರಾಪ್ತ ಬಾಲಕನಿಂದ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಶಿವಮೊಗ್ಗದ ಟಿಪ್ಪು ನಗರದ ಮಟನ್ ಸ್ಟಾಲ್ ಒಂದರ ಬಳಿ ಘಟನೆ ನಡೆದಿದೆ. ಮಟನ್ ಅಂಗಡಿಯ ಬಳಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ನಡೆದ ಹಲ್ಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಮಲ್ಲೇಶ್ (45) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಮಲ್ಲೇಶ್ ಮಟನ್ ಅಂಗಡಿಗೆ ಹೋಗಿದ್ದನು. ಅಂಗಡಿಯಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ ಮಟನ್ ಪಡೆದ ಮೇಲೆ ಇನ್ನೂ ಹೆಚ್ಚು ಹಾಕುವಂತೆ ಗಲಾಟೆ ಮಾಡಿದ್ದನು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಆಗ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಮಟನ್ ಹೆಚ್ಚಿಗೆ ಹಾಕಲು ಸಾಧ್ಯವಿಲ್ಲ. ನಾನು ಮಟನ್ ಹಾಕುವುದಿಲ್ಲ ಎಂದು ಹೇಳಿದ್ದಾನೆ. ಆಗ ಕುಡಿದ ಮತ್ತಿನಲ್ಲಿ ಬಂದಿದ್ದ ಮಲ್ಲೇಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಜಗಳ ತಲುಪಿದೆ. ಆಗ ಬಾಲಕ ಮಟನ್ ಕಡಿಯುವ ಮಚ್ಚಿನಿಂದ ಮಟನ್‌ಗಾಗಿ ಗಲಾಟೆ ಮಾಡುತ್ತಿದ್ದ ಮಲ್ಲೇಶ್ ಎಂಬ ವ್ಯಕ್ತಿಯ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.

ಮಚ್ಚಿನಿಂದ ತಲೆಗೆ ಒಡೆಯುತ್ತಿದ್ದಂತೆಯೇ ಆತನ ತಲೆ ಭಾಗದಲ್ಲಿ ದೊಡ್ಡ ಗಾಯವಾಗಿದ್ದು, ರಕ್ತ ಸೋರಲು ಆರಂಭಿಸಿದೆ. ಕೂಡಲೇ ಸ್ಥಳದಲ್ಲಿ ತಲೆ ತಿರುಗಿ ಬಿದ್ದಿದ್ದಾನೆ. ನಂತರ ಆತನನ್ನು ಸ್ಥಳೀಯರು ಆಂಬುಲೆನ್ಸ್ ಕರೆಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಹಲ್ಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತಂತೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 

 


Leave a Reply

Your email address will not be published.