ಶಿವಮೊಗ್ಗ : ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ ಆಗಿದ್ದು, ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶ ಕುತೂಹಲ ಹೆಚ್ಚಿಸಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದು, ಚುನಾವಣೆಯಲ್ಲಿ ಗೆಲುವು ಯಾರಿಗೆ? ಎಂಬ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂಈ ಕ್ಷೇತ್ರದ ಫಲಿತಾಂಶದಲ್ಲಿ ಉತ್ತಮ ಪೈಪೋಟಿ ನಿರೀಕ್ಷೆಯಿದೆ. ಇದರಿಂದ ಹಲವೆಡೆ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಪೂಜೆ ಹೋಮ, ಹವನಗಳನ್ನು ನಡೆಸುತ್ತಿದ್ದಾರೆ. ಇಂದು ಈ ಬಾರಿ ಚುನಾವಣೆಯಲ್ಲಿ ಗೆಲುವಿನ ಹಾರ ಯಾರ ಕೊರಳಿಗೆ ಎಂದು ಕೆಲವೇ ಗಂಟೆಗಳಲ್ಲಿತಿಳಿಯಲಿದ್ದು, ಕುತೂಹಲ ಹೆಚ್ಚಾಗುತ್ತಲೇ ಇದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಒಂದು ತಿಂಗಳಿಗೂ ಹೆಚ್ಚು ಕಾದ ಚುನಾವಣೆ ಫಲಿತಾಂಶದ ಕಾಯುವಿಕೆಗೆ ಬ್ರೇಕ್ ಬೀಳಲಿದೆ. ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದ್ದು, ಶಿವಮೊಗ್ಗ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ
ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರ ಪುತ್ರ, ಶಿವಮೊಗ್ಗದ ಹಾಲಿ ಸಂಸದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ. ವೈ. ರಾಘವೇಂದ್ರ, ಕಾಂಗ್ರೆಸ್‌ನಿಂದ ಬಂಗಾರಪ್ಪ ಪುತ್ರಿ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಎದುರಾಳಿ. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದರು. ಈ ಪೈಕಿ ಶಿವಮೊಗ್ಗ ಲೋಕಸಭಾ ಅಖಾಡದ ಅಧಿಪತಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ
2009ರಲ್ಲಿ ಶಿವಮೊಗ್ಗ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ಚುನಾವಣಾ ಹೋರಾಟಕ್ಕೆ ನಾಂದಿ ಹಾಡಿತು. ಬಿ. ವೈ. ರಾಘವೇಂದ್ರ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಎಸ್. ಬಂಗಾರಪ್ಪ ಎದುರಾಳಿ. ರಾಘವೇಂದ್ರ 482,783 ಮತಗಳನ್ನು ಪಡೆದು ಎಸ್. ಬಂಗಾರಪ್ಪ (429,890 ಮತಗಳು) ಸೋಲಿಸಿದರು.
2014ರಲ್ಲಿ ಬಿಜೆಪಿ ಬಿ. ಎಸ್. ಯಡಿಯೂರಪ್ಪ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆಗ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್‌ನಿಂದ ಎದುರಾಳಿಯಾದರು. ಯಡಿಯೂರಪ್ಪ 606,216 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿದರು. ಕಾಂಗ್ರೆಸ್‌ನ ಮಂಜುನಾಥ ಭಂಡಾರಿ 242,911 ಮತ ಪಡೆದು 2ನೇ ಸ್ಥಾನ, ಗೀತಾ ಶಿವರಾಜ್ ಕುಮಾರ್ 240,636 ಮತ ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
2018ರ ವಿಧಾನಸಭೆ ಚುನಾವಣೆ ಬಂದಾಗ ಯಡಿಯೂರಪ್ಪ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರದಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಆಗ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಬಿಜೆಪಿ ಬಿ. ವೈ. ರಾಘವೇಂದ್ರ ಕಣಕ್ಕಿಳಿಸಿತು. ಆಗ ಜೆಡಿಎಸ್‌ನಿಂದ ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಎದುರಾಳಿಯಾದರು. ರಾಘವೇಂದ್ರ 50 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬಂಗಾರಪ್ಪ ಕುಟುಂಬಕ್ಕೆ ಮತ್ತೆ ಸೋಲುಣಿಸಿದರು.
2019ರ ಚುನಾವಣೆಯಲ್ಲಿ ಬಿ. ವೈ. ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ರಾಘವೇಂದ್ರ 729,872 ಮತಗಳನ್ನು ಪಡೆದು ಗೆಲುವು ಸಾಧಿಸಿ ಮೂರನೇ ಬಾರಿ ಸಂಸದರಾಗಿ ಆಯ್ಕೆಯಾದರು. ಮಧು ಬಂಗಾರಪ್ಪ 506,512 ಮತಗಳನ್ನು ಪಡೆದು ಸೋತರು.
ಈ ಚುನಾವಣೆಯಲ್ಲಿ ಗೆದ್ದು 4ನೇ ಬಾರಿ ಸಂಸದರಾಗುವ ಉತ್ಸಾಹದಲ್ಲಿ ಬಿ. ವೈ. ರಾಘವೇಂದ್ರ ಇದ್ದಾರೆ. ಹಿಂದಿನ ಚುನಾವಣೆ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಮತ್ತು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕೆ. ಎಸ್. ಈಶ್ವರಪ್ಪ ಹಿಂದುತ್ವಕ್ಕೆ ಜನರ ಬೆಂಬಲವಿದೆ, ನಾನು ಗೆದ್ದು ಸಂಸತ್ ಪ್ರವೇಶಿಸಿ ಮೋದಿ ಕೈ ಬಲಪಡಿಸುತ್ತೇನೆ ಎಂಬ ನಂಬಿಕೆಯಲ್ಲಿದ್ದಾರೆ.
ಪ್ರಾಬಲ್ಯ ಯಾರದ್ದು ? :
ಶಿವಮೊಗ್ಗ ಲೋಕಸಭೆ ಕ್ಷೇತ್ರ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರರಲ್ಲಿ ಕಾಂಗ್ರೆಸ್ ಶಾಸಕರು. ಒಂದು ಕ್ಷೇತ್ರ ಜೆಡಿಎಸ್ ಪಾಲಿನದ್ದು.
ಮೈತ್ರಿಯಿಂದ ಲಾಭ?
ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆ. ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಡಿಮೆ ಅಂತರದಿಂದ ಸೋಲು ಕಂಡಿದ್ದಾರೆ. ಆದ್ದರಿಂದ ಇತರೆ ಕ್ಷೇತ್ರದಲ್ಲಿ ಜೆಡಿಎಸ್ ಹಿಡಿತ ಇಲ್ಲದಿದ್ದರೂ ಈ ಎರಡು ಕ್ಷೇತ್ರದಲ್ಲಿ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಕ್ಕಲಿಗರು ಸ್ವಲ್ಪ ಮಟ್ಟಿಗೆ ಇದ್ದಾರೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಲಾಭ ಆಗಲಿದೆ
ಯಡಿಯೂರಪ್ಪ ಪಾರುಪತ್ಯ
ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರದ್ದೇ ಪಾರುಪತ್ಯ. ಸಮಾಜವಾದಿ ಹಿನ್ನೆಲೆ ಹೊಂದಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ಬಂಗಾರಪ್ಪ ಅವರ ಪಾರುಪತ್ಯ ಇತ್ತು. 2009 ರಲ್ಲಿ ಬಂಗಾರಪ್ಪ ಸೋಲಿನ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆಗಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಎಸ್‌ವೈ ಅವರದ್ದೇ ಆರ್ಭಟ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನದಲ್ಲಿ ಈಡಿಗರು ಇದ್ದಾರೆ. ಹೀಗಾಗಿ ಬಂಗಾರಪ್ಪ ನಂತರ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಹಿಡಿತದಲ್ಲಿ ಕ್ಷೇತ್ರ ಇದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply