ಶಿವಮೊಗ್ಗ : ಐತಿಹಾಸಿಕವಾಗಿ ಮಲೆನಾಡು ರಾಜ್ಯ ರಾಜಕೀಯದ ಪವರ್ ಸೆಂಟರ್ ಆಗಿ ಪ್ರಾಬಲ್ಯ ಸಾಧಿಸಿದೆ, ನಾಲ್ಕು ಮುಖ್ಯಮಂತ್ರಿಗಳು ಮತ್ತು ಒಬ್ಬ ಉಪಮುಖ್ಯಮಂತ್ರಿಯನ್ನು ಕೊಟ್ಟಿರುವ ಮಲೆನಾಡು ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಹೆಸರನ್ನ ಮಾಡಿದೆ. ಮಲೆನಾಡಿನ ರಾಜಕೀಯ ಹಾಗೂ ರಾಜಕಾರಣಿಗಳು ಜನರ ಮನಸ್ಥಿತಿ ಪರಿಸ್ಥಿತಿಗಳನ್ನ ಅರ್ಥೈಸಿಕೊಂಡು, ಸಾಮಾನ್ಯ ಜನರ ಸಮಸ್ಯೆಗಳಿಗೆ ಧ್ವನಿ ಯಾಗುತ್ತಾ ಹೋರಾಟದ ಹಿನ್ನೆಲೆ ಮಲೆನಾಡಿನ ರಾಜಕಾರಣ ಬೆಳೆದು ಬಂದಿದೆ ಅದಕ್ಕೆ ಭಾನು ಪ್ರಕಾಶ್ ಅವರು ಕೂಡ ಸಾಕ್ಷಿಯಾಗಿದ್ದಾರೆ, ತಮ್ಮ ಹೋರಾಟದ ಮುಖಾಂತರವೇ ರಾಜಕಾರಣಿಗಳಿಗೆ ತಮ್ಮ ತಪ್ಪನ್ನು ನೇರ ನೇರವಾಗಿ ಹೇಳಿ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕವಾಗಿ ರಾಜಕೀಯ ನಡೆಸಿದ ಅಜಾತಶತ್ರು ರಾಜಕಾರಣಿ ಭಾನು ಪ್ರಕಾಶ್ ಅವರು. ತಮ್ಮ ಕುಟುಂಬ ಬೇರೆಯಲ್ಲ ಸಂಘ ಪರಿವಾರ ಬೇರೆಯಲ್ಲ ಎಂದು ತಮ್ಮ ಜೀವನ ಶೈಲಿಯನ್ನು ತ್ಯಾಗದ ಪ್ರತಿರೂಪವಾಗಿ ಸಮರ್ಪಿಸಿಕೊಂಡು, ಕುಟುಂಬವೂ ಸಹ ಸಂಘದ ಸೇವೆಗಾಗಿ ಸಮರ್ಪಿಸುವಂತೆ ಮಾಡಿದ ಕ್ರಿಯಾಶೀಲ ರಾಜಕಾರಣಿ ಭಾನು ಪ್ರಕಾಶ್ ಅವರು
ಬಿಜೆಪಿಯ ಹಿರಿಯ ಮುಖಂಡ. ಸರಳ, ಸಜ್ಜನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ ಬಿ ಭಾನು ಪ್ರಕಾಶ್ ಅವರ ಹಠಾತ್ ನಿಧನ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ದೊಡ್ಡ ಆಘಾತವಾಗಿದೆ.
ಬಾಲ್ಯದಿಂದಲೇ ಸಂಘದ ನೆನಪಿನಲ್ಲಿಯೇ ಬೆಳೆದು ಬಂದ ಇವರು ವಿಶ್ವದ ಏಕೈಕ ಸಂಸ್ಕೃತ ಗ್ರಾಮ ಎಂದು ಹೆಗ್ಗಳಿಕೆ ಪಡೆದಿರುವಂತಹ, ಆರ್ ಎಸ್ ಎಸ್ ನ ಶಕ್ತಿ ಕೇಂದ್ರವಾಗಿರುವ ಮತ್ತೂರು ಗ್ರಾಮದವರು.
ಸಾವಿಗೂ ಮುನ್ನ ಕೊನೆ ಕ್ಷಣದಲ್ಲಿ ನಡೆದಿದ್ದೇನು ?
ಸೋಮವಾರ ಗೋಪಿ ವೃತ್ತದ ಬಳಿ ಬಿಜೆಪಿ ಪಕ್ಷದ ವತಿಯಿಂದ ಪೆಟ್ರೋಲ್ ಡೀಸೇಲ್ ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ಭಾನು ಪ್ರಕಾಶ್ ಹಾಗೂ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಭಾನುಜಿ ಪ್ರತಿಭಟನೆಯ ಅನಿವಾರ್ಯತೆಯನ್ನು ಕಾರ್ಯಕರ್ತರ ಮುಂದೆ ತೆರೆದಿಟ್ಟಿದ್ದರು. ಬೆಲೆ ಏರಿಕೆಯ ವಿರುದ್ಧ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ ಅವರು ರಘುಪತಿ ರಾಘವ ರಾಜಾರಾಮ, ಪತೀತ ಪಾವನ ಸೀತಾರಾಮ ಎಂದು ಹಾಡಿ ಹಾಗೂ ಹಾಡಿಸಿ ಸೀತಾರಾಮಚಂದ್ರನಿಗೆ ಜೈ ಎಂದು ಘೋಷಣೆ ಕೂಗಿದ್ದರು. ಅಲ್ಲದೆ ಕೊನೆಯಲ್ಲಿ ಗೋವಿಂದ ಗೋವಿಂದ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಅವರು, ನಂತರ ಸುಸ್ತಾಗುತ್ತಿದೆ ಎಂದು ಮನೆಗೆ ಹೋಗಲು ಕಾರು ಹತ್ತುತ್ತಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ ತಕ್ಷಣವೇ ಆಪ್ತರು ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವಿಶೇಷ ವೈದ್ಯರ ತಂಡ ಅವರನ್ನು ಉಳಿಸಿಕೊಳ್ಳಲು ಮುಂದಾಗಿದೆ. ಆದರೆ ಮಾನವ ಪ್ರಯತ್ನಕ್ಕೆ ಸ್ಪಂದಿಸುವ ಮೊದಲೇ ಭಾನುಪ್ರಕಾಶ್‌ರವರು ಇಹಲೋಕ ತ್ಯಜಿಸಿದ್ದರು.
ಅಜಾತ ಶತ್ರು ಭಾನು ಜಿ
ಹೋರಾಟದ ಹಾದಿಯಿಂದಲೇ ರಾಜಕೀಯಕ್ಕೆ ದುಮುಕಿದ ಭಾನುಪ್ರಕಾಶ್ ಅವರು 2001ರಲ್ಲಿ ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಬಿಜೆಪಿಯಿಂದ ಮೊದಲ ಬಾರಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಕ್ರಿಯ ರಾಜಕಾರಣದಲ್ಲಿ ತಮ್ಮನ ತೊಡಗಿಸಿಕೊಂಡರು. ನಂತರ 2004 ರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಂಗಾರಪ್ಪನವರ ಎದುರಾಳಿಯಾಗಿ ಬಿಜೆಪಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು, ಪ್ರಚಾರದ ವೇಳೆ ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಮತ್ತು ಭಾನುಪ್ರಕಾಶ್ ಅವರು ಮುಖಮುಖಿ ಯಾದ ಸಂದರ್ಭದಲ್ಲಿ ಬಂಗಾರಪ್ಪನವರು “ ಭಾನು ಜಿ ನೀವು ಜಂಟಲ್ ಮ್ಯಾನ್ “ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲಲಿಲ್ಲ ಅಂದರೆ ಗೆಲುವು ನಿಮ್ಮದಾಗಲಿ ಎಂದು ಹಾರೈಸಿದ್ದರಂತೆ
ಕೆಡಿಪಿ ಸಭೆಗಳಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ‘ಸರ್ ನಾನು ನಿಮ್ಮ ಕ್ಷೇತ್ರದ ಮತದಾರ. ನನ್ನ ಸ್ವಗ್ರಾಮ ಮತ್ತೂರು ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ಊರಿನ ಕೆಲಸವನ್ನು ಆದ್ಯತೆ ಮೇಲೆ ಮಾಡಿಕೊಡಬೇಕು ಎನ್ನುತ್ತಿದ್ದರು. ಕಿಮ್ಮನೆ ಕೂಡಾ ಅವರ ಊರಿನ ಬಹುತೇಕ ಬೇಡಿಕೆಗಳಿಗೆ ನಗು ನಗುತ್ತಲೇ ಅಸ್ತು ಅನ್ನುತ್ತಿದ್ದರು.
ಇನ್ನು ಜೆಡಿಎಸ್ ನ ಅಪ್ಪಾಜಿ ಗೌಡರ ಜೊತೆ ಕೂಡಾ ಇವರದು ಅದೇ ಪಿತ್ಯಾದರ. ಮಧು ಬಂಗಾರಪ್ಪ ಮೊದಲ ಬಾರಿ ಜೆಡಿಎಸ್ ನಿಂದ ಶಾಸಕರಾದಾಗ, ಅವರು ಸಭೆಗಳಲ್ಲಿ ವಿಷಯ ಮಂಡಿಸಿದಾಗ, ಭಾನುಪ್ರಕಾಶ್ ಅವರನ್ನು ಬೆಂಬಲಿಸಿ ಮಾತನಾಡುತ್ತಿದ್ದರು.
ಕಾಗೋಡು ತಿಮ್ಮಪ್ಪನವರು ಅವರನ್ನು ಪ್ರೀತಿಯಿಂದ ‘ಭಾನು ಭಟ್ರೇ’ ಅನ್ನುತ್ತಿದ್ದರು . ಈ ಮೂಲಕ ಎದುರಾಳಿಗಳ ಮತ್ತು ಸರ್ವ ಪಕ್ಷದ ನಾಯಕರ ಮನಸ್ಸನ್ನು ಗೆದ್ದು ಅಜಾತ ಶತ್ರು ಎಂಬುದನ್ನು ಸಾಬೀತುಪಡಿಸಿದ್ದರು.
ಬಿಎಸ್ ಯಡಿಯೂರಪ್ಪನವರ ಈ ಹಿಂದೆ ಕೆಜೆಪಿ ಪಕ್ಷವನ್ನು ಕಟ್ಟಿದ ಸಂಧರ್ಭದಲ್ಲಿ ಅವರ ನಡೆಯನ್ನೆ ಹಿಂದೊಮ್ಮೆ ವಿರೋಧಿಸಿದ್ದ ಅವರು ಇತ್ತೀಚೆಗೆ ಈಶ್ವರಪ್ಪನವರ ಬಂಡಾಯದ ಸಂದರ್ಭದಲ್ಲಿ ಫೇಸ್‌ಬುಕ್ ಪೋಸ್ಟ್‌ವೊಂದನ್ನ ಹಾಕಿದ್ದರು. ಆ ಮೂಲಕ ಪಕ್ಷದ ಬೆಳವಣಿಗೆಯನ್ನು ವಿಭಿನ್ನವಾಗಿ ಅರ್ಥವಾಗಿಸಿದ್ದರು.
ನಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಭಾನುಪ್ರಕಾಶ್ ಅವರು ಬಳಿಕ 2013-19 ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ರಾಜ್ಯ ಪ್ರಕೋಷ್ಠಗಳ ಸಂಯೋಜಕರಾಗಿ ಪಕ್ಷವನ್ನು ಶಿಸ್ತು ಬದ್ಧವಾಗಿ ಸಂಘಟಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದರು. ತಮ್ಮ ಜೀವನದುದ್ದಕ್ಕೂ ಜನಪರ ಹೋರಾಟ, ಸಂಘರ್ಷ, ಸಂಘಟನೆಯಲ್ಲೇ ಕಳೆದ ಭಾನುಪ್ರಕಾಶ್ ಅವರು ತಮ್ಮ ಕೊನೆ ಉಸಿರನ್ನೂ ಹೋರಾಟದಲ್ಲೇ ಕಳೆದಿದ್ದು ಅವರ ಹೋರಾಟದ ಬದುಕಿನ ದ್ಯೋತಕವಾಗಿದೆ.”
ಲೇಖನ : ಲಿಂಗರಾಜ್ ಗಾಡಿಕೊಪ್ಪ
Leave a Reply