ಶಿವಮೊಗ್ಗದಲ್ಲಿ ಅಪ್ಪನನ್ನೇ ಚಾಕುವಿನಿಂದ ಇರಿದು ಹತ್ಯೆಗೈದ ಮಗ !

ಭದ್ರಾವತಿ : ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಅಮ್ಮನ ಜೊತೆ ಜಗಳ ಮಾಡುತ್ತಿದ್ದ ಅಪ್ಪನನ್ನು ಸ್ವಂತ ಮಗನೇ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನ ಶುಕ್ರರಾಜ್ ಯಾನೆ ಅಲಿಯಾಸ್ ಶುಕ್ರ(50) ಎನ್ನಲಾಗಿದೆ.

ಈ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರೆಬಿಳಚಿ ಗ್ರಾಮದಲ್ಲಿ ನಡೆದಿದೆ. ತಾಯಿ ಶಿಲ್ಪಾ ಗ್ರಾಮ ಪಂಚಾಯಿತಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಅಮ್ಮನ ದುಡಿಮೆಯಿಂದ ಮನೆ ನಡೆಯುತ್ತಿತ್ತು. ಆದರೆ, ಅಪ್ಪ ಶುಕ್ರರಾಜ್ ಯಾನೆ ಅಮ್ಮ ಶಿಲ್ಪ ಮೇಲೆ ಪದೇ ಪದೇ ಜಗಳ ಮಾಡುತ್ತಿದ್ದನು. ನೀನು ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗುವುದು ಬೇಡ ಬಿಟ್ಟುಬಿಡು ಎಂದು ಹೇಳುತ್ತಿದ್ದನು. ಆದರೆ, ಮನೆ ನಿರ್ವಹಣೆಗೆ ಕಷ್ಟವಾಗುತ್ತದೆಂದು ಅರಿತು ಶಿಲ್ಪಾ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದಳು.

ಇನ್ನು ಕೊಲೆ ಘಟನೆಯ ದಿನವೂ ಶಿಲ್ಪಾ ಗ್ರಾಮ ಪಂಚಾಯಿತಿ ಕೆಲಸಕ್ಕೆ ಹೋಗದಂತೆ ಶುಕ್ರರಾಜ್ ಹೇಳಿದ್ದಾರೆ. ಆದರೆ, ಪತಿಯ ಮಾತನ್ನ ನಿರ್ಲಕ್ಷಿಸಿ ಕೆಲಸಕ್ಕೆ ಹೋಗುವುದಾಗಿ ಪತ್ನಿ ಹೇಳಿದ್ದಾಳೆ. ಮಾತು ಕೇಳದ ಹಿನ್ನೆಲೆಯಲ್ಲಿ ನಡುವೆ ಇನ್ನ ಸಂಜೆ ವೇಳೆಯೂ ಜಗಳ ಶುರುವಾಗಿದೆ. ಈ ವೇಳೆ ಶಿಲ್ಪಾ ತನ್ನ ಅಪ್ರಾಪ್ತ ಮಗನಿಗೆ ನಿನ್ನ ಅಪ್ಪ ಹಲ್ಲೆ ಮಾಡುತ್ತಿದ್ದಾನೆ ಎಂದು ಫೋನ್ ಮೂಲಕ ಕರೆ ಮಾಡಿ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡು ಮನೆಗೆ ಬಂದ ಮಗ ಅಪ್ಪನಿಗೆ ಬುದ್ಧಿ ಕಲಿಸಬೇಕು, ಅಮ್ಮನಿಗೆ ಶಾಶ್ವತವಾಗಿ ನೆಮ್ಮದಿ ಕೊಡಬೇಕು ಎಂದು ಅಪ್ಪ ಶುಕ್ರರಾಜ್‌ನಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಲ್ಲಿ ಒದ್ದಾಡಿದ್ದ ಶುಕ್ರರಾಜ್ ಅಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

ಈ ಕೊಲೆ ಮಾಡಿದ ಅಪ್ರಾಪ್ತನನ್ನ ಹೊಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಕೊಲೆಯಾದ ಶುಕ್ರರಾಜ್ ಯಾನೆ ಕೃಷಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದನು. ಇನ್ನು ಕೊಲೆ ಮಾಡಿದ ಅಪ್ರಾಪ್ತ ಮಗ ಕಾಲೇಜಿಗೂ ಹೋಗದೇ ಹಾಗೂ ಕೆಲಸಕ್ಕೂ ಹೋಗದೇ ಪುಡಾರಿಯಾಗಿ ಸುತ್ತಾಡುತ್ತಿದ್ದನು. ಇನ್ನು 25 ವರ್ಷದ ಹಿಂದೆ ಶಿಲ್ಪ ಮತ್ತು ಶುಕ್ರ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ದಂಪತಿಗಳಿಗೆ ಇಬ್ವರು ಮಕ್ಕಳಿದ್ದಾರೆ. ಮೂರು ವರ್ಷದ ಹಿಂದೆ ಪಂಚಾಯಿತಿ ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ವಿರುದ್ಧ ಶುಕ್ರ ವಿರೋಧ ಮಾಡುತ್ತಿದ್ದನು. ಈ ಕಾರಣದಿಂದಲೇ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ನಿನ್ನೆ ಬಂದು ಕೆಲಸಕ್ಕೆ ಹೋಗಬೇಡ, ನೀನು ನನ್ನೊಂದಿಗಿರು ಎಂದು ಜಗಳ ಮಾಡುವಾಗ ಮಗ ಕೊಲೆ ಮಾಡಿದ್ದಾನೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.