ಭದ್ರಾವತಿ : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಜನರ ಸಾಮೂಹಿಕ ಅಂತ್ಯಸಂಸ್ಕಾರವನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನೆರವೇರಿಸಲಾಯಿತು.
ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, ಅದರಲ್ಲಿ 9 ಮಂದಿಯನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಯಿತು.
ಆದರ್ಶ್, ವಿಶಾಲಾಕ್ಷಿ, ನಾಗೇಶ್ ರಾವ್, ಸುಭದ್ರಾ ಬಾಯಿ, ಮಾನಸಾ, ರೂಪಾ ಬಾಯಿ, ಭಾಗ್ಯಬಾಯಿ, ಅರುಣ್ ಕುಮಾರ್, ಮಂಜುಳಾ ಒಟ್ಟು 9 ಮಂದಿಗೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
4 ಅಂಬುಲೆನ್ಸ್ ನಲ್ಲಿ ಹುಟ್ಟೂರಿಗೆ ಮೃತ ದೇಹಗಳನ್ನು ತರಲಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು, ಅಕ್ಕ ಪಕ್ಕದ ಗ್ರಾಮಸ್ಥರು ಸಹ ಬಂದು ಅಂತಿಮ ದರ್ಶನ ಮಾಡಿದರು.
ಶಾಮಿಯಾನ, ಟೇಬಲ್ , ವಿದ್ಯುತ್ ಹಾಕಿ ಗ್ರಾಮಸ್ಥರು ಸಕಲ ಸಿದ್ದತೆ ಮಾಡಿಕೊಂಡಿದ್ದರು. ಸಾವಿರಾರು ಜನ ಗ್ರಾಮದಲ್ಲಿ ನೆರೆದು ಮೃತರ ದರ್ಶನ ಪಡೆದರು. ಮೃತರನ್ನು ಅಂಬುಲೇನ್ಸ್ ನಲ್ಲಿ ತರುತ್ತಿದ್ದಂತೆ ಸಂಬಂಧಿಕರು, ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಎಸ್ ಎನ್ ಚನ್ನಬಸಪ್ಪ ಕೂಡ ಗ್ರಾಮಕ್ಕೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು.
ಅಂತ್ಯಸಂಸ್ಕಾರ ದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಕೂಡ ಪಾಲ್ಗೊಂಡಿದ್ದರು. ಮೃತರ ಕುಂಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಮೃತರ ಕುಟುಂಬಕ್ಕೆ ತಲಾ 50 ಸಾವಿರ ನೆರವು ನೀಡಿದರು.
ಗ್ರಾಮದ ಹಿಂದೂ ರುದ್ರಭೂಮಿಗೆ 9 ಮೃತ ದೇಹಗಳನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಬರಲಾಯಿತು. ಬಳಿಕ ವಿಧಿ ವಿಧಾನಗಳನ್ನು ಪೂರೈಸಿ ಸಾಮೂಹಿಕವಾಗಿ ಮೃತದೇಹಗಳಿಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಸಂಸ್ಕಾರದ ವೇಳೆ ನೂರಾರು ಜನ ಹಾಜರಿದ್ದು ಕಣ್ಣೀರು ಹಾಕಿದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply