ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಶೀಘ್ರವೇ ಮಾಡಬೇಕು. ರಾಷ್ಟ್ರ ಭಕ್ತರ ಬಳಗದಿಂದ ಪಾಲಿಕೆಯ 35 ವಾರ್ಡ್ಗಳಲ್ಲೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇವೆ. ಪಾಲಿಕೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಮೊದಲ ಆದ್ಯತೆ. ವಾರ್ಡ್ಗಳ ನಡುವೆ ಜನಸಂಪರ್ಕ ಇರುವ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ?. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ, ಶಿಮೂಲ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಎರಡೂ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಸಬೇಕು. ನನ್ನ ಜೀವನದಲ್ಲಿ ಯಾವುದೇ ಚುನಾವಣೆ ನಿಲ್ಲಲು ನಾನು ಬೆಂಬಲ ನೀಡಿಲ್ಲ. ಚುನಾವಣೆ ಬಿಟ್ಟರೆ ಪ್ರಜಾಪ್ರಭುತ್ವ ಇಲ್ಲದಂತೆ ಆಗುತ್ತದೆ ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟುಬಿಡಿ. ಯಾವ ಮೀಸಲಾತಿಯಿತ್ತೋ ಅದೇ ಮೀಸಲಾತಿಯಲ್ಲಿ ಚುನಾವಣೆ ನಡೆಸಿ ಇಲ್ಲವೇ ಬದಲಾಯಿಸಿ ಮಾಡಿ ಎಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ ಅವರು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವವನು ನಾನು, ನೆಗೆದು ಬಿದ್ದು ಹೋಗುತ್ತೇನೆ ಎಂದು ಕೊಳ್ತೆನಾ?. ರಾಜಕಾರಣದಲ್ಲಿ ಗೆಲ್ಲುತ್ತಾರೆ ಮತ್ತು ಸೋಲುತ್ತಾರೆ. ಇಂದಿರಾ ಗಾಂಧಿ, ಸಿದ್ದರಾಮಯ್ಯ ಬಹಳಷ್ಟು ನಾಯಕರ ಸೋಲು ಕಂಡಿದ್ದಾರೆ. ಇದಕ್ಕೆ ಹೋಗುವರು ಗೆಲ್ಲುತ್ತೇನೆ ಎಂದೆ ಹೋಗಬೇಕು ಸೋಲುತ್ತೇನೆ ಎಂದು ಹೋಗುವರು ಧೀರನಾ? ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂತೇಶ್ ಸ್ಪರ್ಧೆ ಮಾಡುವುದಿಲ್ಲ. ಚಕ್ರ ಸುತ್ತುತ್ತಾ ಇದೆ ಮೋಸ ಮಾಡಿದ್ದಾರೆ. ಭಗವಂತ ಇದ್ದಾನೆ ಮೋಸ ಮಾಡಿದವರು ಇಂದಲ್ಲ ನಾಳೆ ಅನುಭವಿಸುತ್ತಾರೆ. ಹಾವೇರಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಮೋಸ ಮಾಡಿದ್ದಾರೆಂದು ಇಂದಿಗೂ ಕ್ಷೇತ್ರ ಜನ ಬಂದು ಹೇಳುತ್ತಾರೆ ಎಂದು ಹೇಳಿದರು.
ಪಾಲಿಕೆ ಚುನಾವಣಾ ಬರುತ್ತಿದ್ದಂತೆ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಫುಲ್ ಆಕ್ಟಿವ್ !
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚುನಾವಣೆ ನಂತರ ರಾಷ್ಟ್ರ ಭಕ್ತರ ಬಳಗ ಶೀರ್ಷಿಕೆ ಅಡಿಯಲ್ಲಿ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಶ್ರಯ ಮನೆ ಹಾಗು ಕಟ್ಟಡ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ದೊರಕಬೇಕಾದ ಸೌಲಭ್ಯಗಳ ಬೇಡಿಕೆ ಇಟ್ಟು ಹಕ್ಕೊತ್ತಾಯ ದಿನ ಎಂಬ ಹೆಸರಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದರು. ಇದಲ್ಲದೆ ರಾಷ್ಟ್ರ ಭಕ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಸ್.ಎನ್. ಮಹಾಲಿಂಗ ಶಾಸ್ತ್ರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಹೀಗೆ ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಫುಲ್ ಆಕ್ಟಿವ್ ಆಗಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply