ಜೈಲಿನಿಂದಲೇ MLA ಮಗನನ್ನು ಮುಗಿಸಲು ಸ್ಕೆಚ್ ! ದಾಖಲಾಯ್ತು ಕೇಸ್ ! F.I.R ನಲ್ಲಿ ಏನಿದೆ ?

ಶಿವಮೊಗ್ಗ : ಜೈಲಿನಿಂದ ಆರೋಪಿಯೊಬ್ಬ ಶಾಸಕರ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದ ಘಟನೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ (BK Sangameshwar) ಪುತ್ರನ ಹತ್ಯೆಗೆ ಸಂಚು ನಡೆದಿದೆ ಎನ್ನವ ಆರೋಪ ಕೇಳಿ ಬಂದಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು (Basavaraju) ಸ್ವಲ್ಪದ್ರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ಎಂಬ ಆರೋಪಿ ಈ ಹತ್ಯೆಗೆ ಸಂಚು ರೂಪಿಸಿದ್ದನು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ. ಡಿಚ್ಚಿ ಮುಬಾರಕ್ ಸುಫಾರಿ ಕೊಟ್ಟಿದ್ದ ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಆರೋಪಿಗಳ ವಿಚಾರಣೆಯನ್ನು ಪೊಲೀಸರು ಶುರು ಮಾಡಿದ್ದಾರೆ.

ಈ ಹತ್ಯೆಯ ಸಂಚು ಜೈಲಿನಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಬಾರಕ್‌ ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಮುಬಾರಕ್ ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಸವರಾಜ್ ರನ್ನ ಹತ್ಯೆ ಮಾಡುವಂತೆ ಟಿಪ್ಪು ಸೇರಿದಂತೆ ಇತರೆ ನಾಲ್ವರಿಗೆ ಸುಫಾರಿ ಕೊಟ್ಟಿದ್ದ. ಇದಕ್ಕಾಗಿ ತಾನೆಲ್ಲಾ ವ್ಯವಸ್ಥೆ ಕೂಡ ಮಾಡಿರುವುದಾಗಿ ಟಿಪ್ಪುವಿಗೆ ಕರೆ ಮಾಡಿ ಹೇಳಿದ್ದ.

ಹತ್ಯೆ ಮಾಡಲು ಡಿಚ್ಚಿ ಮುಬಾರಕ್ ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಟಿಪ್ಪುಗೆ ಹೇಳಿದ್ದನೆನ್ನಲಾಗಿದೆ. ಸದ್ಯ ಟಿಪ್ಪುವನ್ನು ಬಂಧಿಸಿದ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ. ಆದರೆ ಜೈಲಿನಲ್ಲಿರುವ ಡಿಚ್ಚಿ ಮುಬಾರಕ್‌ಗೆ ಫೋನ್ ಕೊಟ್ಟವರು ಯಾರು? ಆತ ಜೈಲಾಧಿಕಾರಿಗಳ ಕಣ್ಣು ತಪ್ಪಿಸಿ ಇಂಥಹ ಸಂಚು ಹೇಗೆ ರೂಪಿಸಿದ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ.

ಈ ಘಟನೆಯನ್ನು ಶಾಸಕರು ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ಯಾರೇ ಆಗಲಿ ಸೂಕ್ತ ತನಿಖೆ ಆಗಬೇಕು. ತಪ್ಪು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನೂ ಹತ್ಯೆಗೆ ಸಂಚು ರೂಪಿಸಿರುವ ವಿಚಾರವಾಗಿ ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ‘ಹಳೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಜೈಲಿನಿಂದ ಒಂದು ಕರೆ ಬಂದಿರುವ ಬಗ್ಗೆ ಹಾಗೂ ಕೊಲೆ ಬೆದರಿಕೆ ಇರೋದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಯಾರು ಆರೋಪಿಸಿದ್ದಾರೆ ಅವರನ್ನ ಕರೆದು ವಿಚಾರಣೆ ಮಾಡ್ತಾ ಇದ್ದೇವೆ. ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದ್ದೇವೆ. ಅಲ್ಲದೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದೇವೆ. ಜೈಲಿನಿಂದ ಕರೆ ಬಂದಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಯಾರಿಂದ ಕರೆ ಬಂದಿದೆ, ಯಾರು ಮಾತಾನಾಡಿದ್ದಾರೆ ಎಲ್ಲವನ್ನೂ ಪರಿಶೀಲನೆ ನಡೆಸುತ್ತೇವೆ’ ಎಂದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.