ಕಾಳುಮೆಣಸಿಗೆ ಬಹಳಷ್ಟು ಬೇಡಿಕೆ ಇದೆ…

ಆನಂದಪುರ : ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳು ಮೆಣಸಿಗೆ ಬಹಳಷ್ಟು ಬೇಡಿಕೆ ಇದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಆರ್ ಸಿ ಜಗದೀಶ್ ತಿಳಿಸಿದರು.

ಇವರು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ರೈತರಿಗೆ ಏರ್ಪಡಿಸಿದ ಕಾಳು ಮೆಣಸಿನಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಮಲೆನಾಡಿನ ವಾತಾವರಣ ಹಾಗೂ ಇಲ್ಲಿನ ಮಣ್ಣಿಗೆ ಕಾಳು ಮೆಣಸು ಉತ್ತಮವಾದ ಫಸಲನ್ನು ನೀಡುತ್ತದೆ. ರೈತರು ಈ ಭಾಗದಲ್ಲಿ ಕಾಳುಮೆಣಸನ್ನು ಅತ್ಯಂತ ಯಶಸ್ವಿಯಾಗಿ ಬೆಳೆಯಬಹುದು ಮತ್ತು ಕಾಳುಮೆಣಸನ್ನು ಆರ್ಥಿಕ ಬೆಳೆಯಾಗಿಯೂ ಸಹ ಬೆಳೆಯಬಹುದು ಎಂದರು.

ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರ್ದೇಶಕರಾದ ಡಾ. ರವಿಕುಮಾರ್ ಮಾತನಾಡಿ ಕಾಳು ಮೆಣಸಿನಲ್ಲಿಯೇ ಹಲವಾರು ತಳಿಗಳಿವೆ ಅದರಲ್ಲಿ ಮಲೆನಾಡಿನ ಭಾಗಕ್ಕೆ ಯಾವ ಸೂಕ್ತವಾದ ತಳಿಯ ಗಿಡಗಳನ್ನು ನೆಡಬೇಕು ಮತ್ತು ಇದರಿಂದಾಗಿ ರೈತರು ಹೇಗೆ ಉತ್ತಮ ಇಳುವರಿಯನ್ನು ಪಡೆಯಬೇಕು ಹಾಗೂ ಯಾವ ರೀತಿ ಇದರ ನಿರ್ವಹಣೆ ಮಾಡುವುದು ಎಂದು ಸೂಕ್ತವಾಗಿ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಜಿ. ಕೆ. ಗಿರಿಜೇಶ್ ಮಾತನಾಡಿ ವಾತಾವರಣದ ವೈಪರಿತ್ಯದಿಂದ ಕಾಳುಮೆಣಸಿಗೆ ಕೀಟ ಮತ್ತು ರೋಗಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಇವುಗಳನ್ನು ಯಶಸ್ವಿಯಾಗಿ ಹತೋಟಿ ಮಾಡಬೇಕಾಗುತ್ತದೆ, ಆದ್ದರಿಂದ ರೈತರು ವಿಶ್ವವಿದ್ಯಾಲಯದ ತಜ್ಞರ ಸಲಹೆ ಪಡೆದು ಇವುಗಳ ಹತೋಟಿ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಹ ಸಂಶೋಧನಾ ನಿರ್ದೇಶಕರಾದ ಡಾ. ಪ್ರದೀಪ್ ಎಸ್, ಸಹಾಯಕ ತೋಟಗಾರಿಕಾ ಅಧಿಕಾರಿ ಅವಿನಾಶ್, ಸಹ ಪ್ರಾಧ್ಯಾಪಕರಾದ ಡಾ.ಸದಾಶಿವ ನಡುಕೇರಿ, ಡಾ. ಬಸವರಾಜಪ್ಪ ಭೋಗಿ,ಹಾಗೂ ಡಾ.ಹೊನ್ನಪ್ಪ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ವರದಿ : ಅಮಿತ್ ಆನಂದಪುರ


Leave a Reply

Your email address will not be published.