ಶಿವಮೊಗ್ಗದ ವೈದ್ಯಕೀಯ ವಿಸ್ಮಯ: ಸೂಜಿ ಗಾತ್ರದ ರಂಧ್ರದಲ್ಲಿ ರಕ್ತಸ್ರಾವ ನಿಲ್ಲಿಸಿದ ಡಾಕ್ಟರ್‌ಗಳು! ಏನಿದು ಕ್ರಾಂತಿಕಾರಿ ಶಸ್ತ್ರಚಿಕಿತ್ಸೆ?**

ಶಿವಮೊಗ್ಗ : ರಕ್ತನಾಳದಲ್ಲಿ ರಂಧ್ರವಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯೊಬ್ಬರಿಗೆ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆ ಯ ವೈದ್ಯರು `ಸೂಜಿ ಗಾತ್ರದ ರಂಧ್ರ’ದ ಮೂಲಕವೇ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ. ಈ ಅತ್ಯಾಧುನಿಕ ‘ಪಿನ್‌ಹೋಲ್’ ಆಪರೇಷನ್ ಬಳಿಕ ಮಹಿಳೆ ಕೇವಲ ಒಂದೇ ದಿನದಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದು, ಈ ಭಾಗದಲ್ಲಿ ಇಂತಹ ಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆದಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯ ವೈದ್ಯರು ಈ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು. ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ‘ಆಧುನಿಕ ಇಂಟರ್‌ವೆನ್ಷನಲ್ ತಂತ್ರಜ್ಞಾನ’ ಬಳಸಿ ‘ಸ್ಪ್ಲೆನಿಕ್‌ ಆರ್ಟರಿ ಎಂಬೋಲೈಸೇಶನ್‌’ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.

 

ದಿಗ್ಭ್ರಮೆಗೊಳಿಸುವ ವೈದ್ಯಕೀಯ ಸವಾಲು

ಹಾವೇರಿ ಜಿಲ್ಲೆಯ 57 ವರ್ಷದ ಶಾರದಾ ಎಂಬುವವರು ಅನ್ನನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರಿಗೆ ಆಹಾರ ನುಂಗಲು ಸಹ ಸಾಧ್ಯವಾಗುತ್ತಿರಲಿಲ್ಲ. ಕ್ಯಾನ್ಸರ್ ಚಿಕಿತ್ಸಕಿ ಡಾ. ನಮ್ರತಾ ಉಡುಪ ಅವರು ನಾಲ್ಕು ಸೈಕಲ್ ಕೀಮೋಥೆರಪಿ ನೀಡಿ ಕ್ಯಾನ್ಸರ್ ಗಡ್ಡೆಯನ್ನು ಕುಗ್ಗಿಸಿದರು. ನಂತರ, ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ಗುರುಚನ್ನ, ಡಾ. ಅರವಿಂದನ್‌ ಮತ್ತು ಅರಿವಳಿಕೆ ತಜ್ಞ ಡಾ. ಪ್ರವೀಣ್‌ ಕುಮಾರ್‌ ಅವರು ಸುಮಾರು ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶದ ಭಾಗವನ್ನು ತೆಗೆದು ಅನ್ನನಾಳವನ್ನು ಎದೆಯ ಭಾಗಕ್ಕೆ ಜೋಡಿಸಿದ್ದರು.

ಈ ರೀತಿಯ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ರೋಗಿಗೆ ರಕ್ತ ಹೆಪ್ಪುಗಟ್ಟದಂತೆ ತಡೆಯಲು ಅಗತ್ಯ ಚುಚ್ಚುಮದ್ದು ಮತ್ತು ಔಷಧಗಳನ್ನು ನೀಡಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆದರೆ, ಆಸ್ಪತ್ರೆಯಿಂದ ಬಿಡುಗಡೆಯಾದ ಆರು ದಿನಗಳ ನಂತರ, ಶಾರದಾ ಅವರು ತೀವ್ರ ಸುಸ್ತು ಮತ್ತು ಹೊಟ್ಟೆನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲಾದರು ಎಂದು ಡಾ. ಅರವಿಂದನ್ ವಿವರಿಸಿದರು.

ಸೂಜಿ ಗಾತ್ರದ ರಂಧ್ರದ ಮೂಲಕ ಕ್ರಾಂತಿಕಾರಿ ಚಿಕಿತ್ಸೆ

ಆಸ್ಪತ್ರೆಗೆ ಮರಳಿ ಬಂದಾಗ ಮಹಿಳೆಯ ಹಿಮೋಗ್ಲೋಬಿನ್ ಪ್ರಮಾಣ ಆತಂಕಕಾರಿಯಾಗಿ ಕೇವಲ 5ಕ್ಕೆ ಕುಸಿದಿತ್ತು. ಸಿ.ಟಿ ಸ್ಕ್ಯಾನ್ ಮಾಡಿದಾಗ, ಸ್ಪ್ಲೀನ್‌ಗೆ (ಪ್ಲೀಹ) ರಕ್ತವನ್ನು ಸಂಚರಿಸುವ ರಕ್ತನಾಳದಲ್ಲಿ ಸಣ್ಣ ರಂಧ್ರವಾಗಿ, ಅಲ್ಲಿಂದ ತೀವ್ರ ರಕ್ತಸ್ರಾವವಾಗಿರುವುದು ಕಂಡುಬಂದಿತ್ತು. ಈಗಾಗಲೇ ಒಂದು ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಗೆ ಮತ್ತೊಂದು ದೊಡ್ಡ ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ತಕ್ಷಣ ಅವರಿಗೆ ರಕ್ತವನ್ನು ನೀಡಲಾಯಿತು.

ಇಲ್ಲಿ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್ ಆಸ್ಪತ್ರೆಯ ಇಂಟರ್‌ವೆನ್ಶನಲ್ ರೇಡಿಯಾಲಜಿಸ್ಟ್ ಡಾ. ನಿಶಿತಾ ಅವರ ಪರಿಣತಿ ನಿರ್ಣಾಯಕ ಪಾತ್ರ ವಹಿಸಿತು. ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ರಕ್ತನಾಳದ ಮೂಲಕ ಸೂಜಿ ಗಾತ್ರದ ಅತಿ ಸಣ್ಣ ಸಾಧನವನ್ನು ಬಳಸಿ, ರಕ್ತಸ್ರಾವವಾಗುತ್ತಿರುವ ನಾಳವನ್ನು ‘ಕಾಯ್ಲಿಂಗ್’ (Coiling) ಮತ್ತು ‘ಎಂಬೋಲೈಸೇಶನ್’ (Embolization) ವಿಧಾನದ ಮೂಲಕ ಯಶಸ್ವಿಯಾಗಿ ಮುಚ್ಚಿದರು. ಇದು ಆಧುನಿಕ ಮತ್ತು ಅತ್ಯಂತ ಕಡಿಮೆ ಅಪಾಯವಿರುವ ಚಿಕಿತ್ಸಾ ವಿಧಾನವಾಗಿದೆ.

“ಸ್ಪ್ಲೀನ್‌ಗೆ ಹಲವು ಕಡೆಗಳಿಂದ ರಕ್ತ ಸರಬರಾಜು ಆಗುತ್ತದೆ. ರೋಗಿಗೆ ಸುಡೋ ನ್ಯೂರಿಸಮ್‌ನಿಂದ ಸ್ಪ್ಲೀನ್‌ನಲ್ಲಿ ರಕ್ತಸ್ರಾವವಾಗಿ ಹೊಟ್ಟೆಯಲ್ಲಿ ರಕ್ತ ತುಂಬಿತ್ತು. ‘ಎಂಡೋವಾಸ್ಕುಲರ್’ ಪದ್ಧತಿ ಬಳಸಿ ತೊಡೆಯ ರಕ್ತನಾಳದ ಮೂಲಕ ಸೂಜಿ ಗಾತ್ರದ ಪಿನ್ ಹೋಲ್ ಮೂಲಕ ಸ್ಪ್ಲೀನ್ ಬಳಿ ಸಾಗಿ ರಕ್ತಸ್ರಾವವನ್ನು ನಿಲ್ಲಿಸಲಾಯಿತು. ಚಿಕಿತ್ಸೆ ನೀಡುವ ವೇಳೆ ಅರಿವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್ ಅವರು ಬಹಳಷ್ಟು ಸಹಕಾರ ನೀಡಿದರು,” ಎಂದು ಡಾ. ನಿಶಿತಾ ತಿಳಿಸಿದರು.

 ಕ್ಷಿಪ್ರ ಚೇತರಿಕೆ ಮತ್ತು ಹೊಸ ಭರವಸೆ

ಶಸ್ತ್ರಚಿಕಿತ್ಸೆ ಮುಗಿದ ತಕ್ಷಣ ರೋಗಿಯ ಹೊಟ್ಟೆನೋವು ಕಡಿಮೆಯಾಯಿತು. ಮಾರನೇ ದಿನವೇ ಮಹಿಳೆ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದರು. ಅವರಿಗೆ ವಿಕಿರಣ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ವೈದ್ಯರು ತಿಳಿಸಿದರು.

ಕ್ಯಾನ್ಸರ್ ಬಗ್ಗೆ ಮಹತ್ವದ ಸಂದೇಶ:

ಕ್ಯಾನ್ಸರ್‌ ಶಸ್ತ್ರಚಿಕಿತ್ಸಕ ಡಾ. ಗುರುಚನ್ನ ಅವರು ಮಾತನಾಡಿ, ತಂಬಾಕು ಬಳಕೆಯಿಂದ ಬಾಯಿಯಿಂದ ಗುದದ್ವಾರದವರೆಗೆ ಎಲ್ಲಿ ಬೇಕಾದರೂ ಕ್ಯಾನ್ಸರ್ ತಗಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಮಾಜದಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಈ ಯಶಸ್ವಿ ಚಿಕಿತ್ಸೆಯ ಸಂದರ್ಭದಲ್ಲಿ ರೇಡಿಯಾಲಜಿಸ್ಟ್ ಡಾ. ಶರತ್ ಚಂದ್ರ, ಕ್ಯಾನ್ಸರ್ ಚಿಕಿತ್ಸಕಿ ಡಾ. ನಮ್ರತಾ ಉಡುಪ ಮತ್ತಿತರ ವೈದ್ಯರು ಉಪಸ್ಥಿತರಿದ್ದರು. ಶಿವಮೊಗ್ಗದಲ್ಲಿ ಇಂತಹ ಅಂತರಾಷ್ಟ್ರೀಯ ಗುಣಮಟ್ಟದ, ಜೀವ ಉಳಿಸುವ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ವರದಿ : ನಾಗರಾಜ್ ಬಿ ಆರ್


Leave a Reply

Your email address will not be published.