ಮಹದೇಶ್ವರ ಬೆಟ್ಟದ ಹುಲಿಗಳ ಸಾವಿಗೆ ‘ಸೇಡು’ ಕಾರಣ! ಮೂವರು ಆರೋಪಿಗಳು ಅರೆಸ್ಟ್..! ಇಲ್ಲಿದೆ ಕಂಪ್ಲೀಟ್ ಕಹಾನಿ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಲಯದಲ್ಲಿ ನಡೆದಿರುವ ಐದು ಹುಲಿಗಳ ಸರಣಿ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಲಭಿಸಿದೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ದೃಢಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತನ್ನ ಹಸುವನ್ನು ಕೊಂದ ಸೇಡಿಗೆ ಹುಲಿಗಳಿಗೆ ವಿಷವಿಕ್ಕಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ…

ಘಟನೆ ಹಿನ್ನೆಲೆ:

ಕಳೆದ ಗುರುವಾರ, ಅಂದರೆ ಜೂನ್ 26, 2025 ರಂದು, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದ ಗಜನೂರು ಗಸ್ತು ಅರಣ್ಯ ಪ್ರದೇಶದ ಮೀಣ್ಯಂನಲ್ಲಿ ಒಂದು ತಾಯಿ ಹುಲಿ (8 ವರ್ಷ) ಮತ್ತು ಅದರ ನಾಲ್ಕು 10 ತಿಂಗಳ ಮರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದವು. ಹುಲಿಗಳ ಮೃತದೇಹಗಳು ಅಕ್ಕಪಕ್ಕದಲ್ಲೇ ಪತ್ತೆಯಾಗಿದ್ದು, ಸ್ಥಳದಲ್ಲೇ ಒಂದು ಹಸುವಿನ ಕಳೇಬರವೂ ದೊರೆತಿತ್ತು. ಈ ಘಟನೆ ವನ್ಯಜೀವಿ ಪ್ರಿಯರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಜಾಹಿರಾತು:

ವಿಷಪ್ರಾಶನ ದೃಢಪಟ್ಟಿತ್ತು:

ಪ್ರಕರಣದ ಗಂಭೀರತೆ ಅರಿತ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಆರಂಭಿಸಿತ್ತು. ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿದಾಗ, ಅವು ವಿಷಪ್ರಾಶನದಿಂದ ಸಾವನ್ನಪ್ಪಿರುವುದು ದೃಢಪಟ್ಟಿತ್ತು. ಇದು ಬೇಟೆಗಾರರ ಕೃತ್ಯವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುತೂಹಲ ಮನೆ ಮಾಡಿತ್ತು.

ಬಂಧನ ಮತ್ತು ಸತ್ಯ ಬಯಲು:

ತನಿಖೆ ತೀವ್ರಗೊಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಕೊನಪ್ಪ, ಮಾದರಾಜು ಅಲಿಯಾಸ್ ಮಾದ ಮತ್ತು ನಾಗರಾಜ ಎಂಬ ಮೂವರನ್ನು ಬಂಧಿಸಿದ್ದಾರೆ. ಆರಂಭದಲ್ಲಿ, ಮುಖ್ಯ ಆರೋಪಿ ಮಾದರಾಜನ ತಂದೆ ಶಿವಣ್ಣ, ತನ್ನ ಮಗನನ್ನು ರಕ್ಷಿಸುವ ಉದ್ದೇಶದಿಂದ ಹುಲಿಗಳನ್ನು ನಾನೇ ಕೊಂದೆ ಎಂದು ಸುಳ್ಳು ಹೇಳಿಕೆ ನೀಡಿದ್ದ. ಆದರೆ, ಪೊಲೀಸರ ತೀವ್ರ ವಿಚಾರಣೆ ವೇಳೆ ನಿಜಾಂಶ ಬಯಲಾಗಿದೆ.

ಸೇಡಿನ ಕೃತ್ಯ:

ಬಂಧಿತ ಮಾದರಾಜು ನೀಡಿದ ಹೇಳಿಕೆಯ ಪ್ರಕಾರ, ಈ ಹಿಂದೆ ಆತನ “ಕೆಂಚಿ” ಎಂಬ ಹಸುವನ್ನು ಹುಲಿಯೊಂದು ಬಲಿ ತೆಗೆದುಕೊಂಡಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಮಾದರಾಜು, ಹುಲಿಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ. ಈ ಬಗ್ಗೆ ನಾಗರಾಜ್ ಜೊತೆ ಚರ್ಚಿಸಿ, ಕ್ರಿಮಿನಾಶಕವನ್ನು ತಂದಿದ್ದಾನೆ. ನಂತರ ಹುಲಿಯಿಂದ ಸತ್ತ ಹಸುವಿನ ಕಳೇಬರಕ್ಕೆ ವಿಷವನ್ನು ಬೆರೆಸಿದ್ದಾನೆ. ಈ ವಿಷಪೂರಿತ ಮಾಂಸವನ್ನು ತಾಯಿ ಹುಲಿ ಮತ್ತು ಅದರ ಮರಿಗಳು ತಿಂದು ಸಾವನ್ನಪ್ಪಿವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಸಚಿವರ ಪ್ರತಿಕ್ರಿಯೆ:

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ಇದು ಅತ್ಯಂತ ದುರದೃಷ್ಟಕರ ಘಟನೆ. ವನ್ಯಜೀವಿ ಸಂರಕ್ಷಣೆ ನಮ್ಮ ಆದ್ಯತೆಯಾಗಿದೆ. ಇಂತಹ ಘೋರ ಅಪರಾಧ ಎಸಗಿದವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಮತ್ತು ಕರ್ನಾಟಕ ಅರಣ್ಯ ಕಾಯಿದೆ 1969 ರ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ” ಎಂದು ತಿಳಿಸಿದ್ದಾರೆ.

ಈ ಪ್ರಕರಣವು ರಾಜ್ಯದ ವನ್ಯಜೀವಿ ಸಂರಕ್ಷಣೆಗೆ ಮತ್ತೊಮ್ಮೆ ಸವಾಲೊಡ್ಡಿದ್ದು, ಅರಣ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಎತ್ತಿ ತೋರಿಸಿದೆ.

ಇದನ್ನು ಓದಿ : ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದ 3000+ ಹುದ್ದೆಗಳಿಗೆ ಅರ್ಜಿ ಆಹ್ವಾನ! ಪೂರ್ತಿ ಓದಲು ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ

ಇಂತಹ ಹೆಚ್ಚಿನ ಸುದ್ದಿಗಳಿಗಾಗಿ ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ಚಾನೆಲ್ ಅನ್ನು ವೀಕ್ಷಿಸುತ್ತಿರಿ.

WhatsApp Number : 7795829207


Leave a Reply

Your email address will not be published.