ಆನಂದಪುರ ‘ವಿಕಸಿತ ಭಾರತ ಸಂಕಲ್ಪ’ ಸಮಾವೇಶ: ‘ಕಾಂಗ್ರೆಸ್ ಭ್ರಷ್ಟಾಚಾರ’ದ ವಿರುದ್ಧ ಹರತಾಳು ಹಾಲಪ್ಪ ವಾಗ್ದಾಳಿ; ‘ಅಭಿವೃದ್ಧಿ ಚರ್ಚೆಗೆ ಬನ್ನಿ’ ಎಂದ ಮೇಘರಾಜ್!

ಶಿವಮೊಗ್ಗ: ನನ್ನ ಅಧಿಕಾರವಧಿಯಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯತರ ಮನೆಗಳ ಬಳಿ ಮಾತ್ರ ರಸ್ತೆ ಮಾಡಿಕೊಟ್ಟಿದ್ದಾರೆ ಎಂಬುದು ಸುಳ್ಳು ಅಪಪ್ರಚಾರ. ನಾನು ಯಾವುದೇ ಜಾತಿ ಧರ್ಮ ನೋಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಆನಂದಪುರದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಸ್ಪಷ್ಟಪಡಿಸಿದರು.

ಇದನ್ನು ಓದಿ: ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು! ಪೂರ್ತಿ ಓದಲು  ಲಿಂಕ್ ಕ್ಲಿಕ್ ಮಾಡಿ

ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರ ಆರೋಪ:

ಸೊರಬ ತಾಲೂಕಿನಲ್ಲಿ ಜನರಿಂದ ಒಂದು ರೂಪಾಯಿಯನ್ನೂ ಪಡೆಯದೆ 12,000 ಮನೆಗಳನ್ನು ನೀಡಿದ ಉದಾಹರಣೆಯನ್ನು ಹಾಲಪ್ಪ ನೀಡಿದರು. ಅಂದು ವಸತಿ ಸಚಿವರಾದ ಸೋಮಣ್ಣ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಹ ಹಣ ನೀಡಿಲ್ಲ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮನೆಗಳನ್ನು ಪಡೆಯಲು ಹಣ ನೀಡಬೇಕು ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿರುವುದು ನೋಡಿದರೆ, ಕಾಂಗ್ರೆಸ್‌ನಲ್ಲಿ ಎಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಯುತ್ತದೆ ಎಂದು ಹಾಲಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಮೋದಿ ಸಂಕಲ್ಪಕ್ಕೆ ಬೆಂಬಲ:

2047ಕ್ಕೆ ಭಾರತವನ್ನು ವಿಶ್ವಗುರುವಾಗಿ ನೋಡುವ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಸಂಕಲ್ಪದ ಬಗ್ಗೆ ಹಾಲಪ್ಪ ಮಾತನಾಡಿದರು. ಭಾರತವು ಪ್ರಪಂಚದಲ್ಲಿಯೇ ಅಗ್ರಗಣ್ಯ ಸ್ಥಾನವನ್ನು ಪಡೆಯಬೇಕು ಮತ್ತು ಆರ್ಥಿಕವಾಗಿ ಬೆಳೆಯಬೇಕು ಎಂಬ ಪ್ರಧಾನಿಯವರ ಹಂಬಲಕ್ಕೆ ನಾವೆಲ್ಲರೂ ಒಂದಾಗಿ ನಿಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜಾಹಿರಾತು:

 

ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ:

ಸಾಗರ ನಗರಸಭಾ ಸದಸ್ಯ ಟಿ.ಡಿ. ಮೇಘರಾಜ್ ಮಾತನಾಡಿ, ಹಾಲಪ್ಪನವರು ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೋ ಅಥವಾ ಗೋಪಾಲಕೃಷ್ಣ ಬೇಳೂರು ಅನುದಾನ ತಂದಿದ್ದಾರೋ ಎಂಬುದರ ಕುರಿತು ಬಹಿರಂಗವಾಗಿ ಚರ್ಚೆ ಮಾಡಲು ಕಾಂಗ್ರೆಸ್ ನಾಯಕರಿಗೆ ಆಹ್ವಾನಿಸಿದರು. ಈಗಿನ ದಿನಗಳಲ್ಲಿ ಕ್ಷೇತ್ರದ ಪ್ರಗತಿಯನ್ನು ಹುಡುಕಬೇಕಾದ ಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆನಂದಪುರದಲ್ಲಿ 10 ಲಕ್ಷ ವೆಚ್ಚದ ಬಸ್‌ಸ್ಟ್ಯಾಂಡ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಹಾಲಪ್ಪನವರ ಸೋಲಿನಿಂದ ಸಾಗರ ಕ್ಷೇತ್ರ 10 ವರ್ಷಗಳಷ್ಟು ಅಭಿವೃದ್ಧಿಯಲ್ಲಿ ಹಿಂದಕ್ಕೆ ಹೋಗುವ ದುಸ್ಥಿತಿಗೆ ತಲುಪಿದೆ ಎಂದರು.

ಈ ಸಂದರ್ಭದಲ್ಲಿ ಸಾಗರ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹಾರೆಕೊಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರತ್ನಾಕರ ಹೊನಗೋಡು, ಆನಂದಪುರ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಾಂತಪ್ಪ ಗೌಡ, ಮ್ಯಾಮ್ ಕೋರ್ಸ್ ನಿರ್ದೇಶಕರಾದ ಭರ್ಮಪ್ಪ, ಗ್ರಾ.ಪಂ. ಅಧ್ಯಕ್ಷ ಗುರುರಾಜ್, ಉಪಾಧ್ಯಕ್ಷೆ ರೂಪನಾಗರಾಜ್, ಅಶೋಕ್, ಕೊಟ್ರಪ್ಪ ಇನ್ನಿತರ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಅಮಿತ್ ಆನಂದಪುರ

WhatsApp Number : 7795829207


Leave a Reply

Your email address will not be published.