ಶಿವಮೊಗ್ಗ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಮತ್ತು ಸೊಸೆಯ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಕಚೇರಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ.
ಪ್ರಕರಣದ ಹಿನ್ನೆಲೆ:
ಶಿವಮೊಗ್ಗದ ವಕೀಲ ವಿನೋದ್ ಬಿ ಅವರು 2012ರಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದೂರು ದಾಖಲಿಸಿದ್ದರು. ಈ ಪ್ರಕರಣವು ನಂತರ ಹಲವು ತಿರುವುಗಳನ್ನು ಪಡೆದಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯವು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶಿಸಿದ ಬಳಿಕ ಶಿವಮೊಗ್ಗ ಲೋಕಾಯುಕ್ತರು ದೂರು ದಾಖಲಿಸಿಕೊಂಡಿದ್ದರು.
ಈ ಪ್ರಕರಣವು ಮೂರು ಬಾರಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಂತಿಮವಾಗಿ, 2021ರಲ್ಲಿ ನ್ಯಾಯಮೂರ್ತಿ ಮೈಕೆಲ್ ಡಿಕುನ್ನ ಅವರು ಪ್ರಕರಣದ ವಿಚಾರಣೆಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದ್ದರು.
ಇದನ್ನು ಓದಿ : ಶಿವಮೊಗ್ಗ : ಐ ಆಮ್ ಸಾರಿ ಅಪ್ಪ ಅಮ್ಮ ಎಂದು ಡೆತ್ ನೋಟ್ ಬರೆದಿಟ್ಟು ಮದುವೆಯಾದ ಮೊದಲ ವರ್ಷದಲ್ಲೇ ಯುವಕ ಆತ್ಮಹತ್ಯೆ!! – ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
ನ್ಯಾಯಾಲಯದ ಆದೇಶ ಮತ್ತು ಪ್ರಸ್ತುತ ಸ್ಥಿತಿ:
ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ 13(1)(d) ಮತ್ತು 13(1)(e) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಮೂರು ತಿಂಗಳ ಒಳಗಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಲೋಕಾಯುಕ್ತರಿಗೆ ಆದೇಶಿಸಿದ್ದಾರೆ.
ಈ ಆದೇಶದ ಮೇರೆಗೆ ಇದೀಗ ಮಾಜಿ ಡಿಸಿಎಂ ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಮತ್ತು ಸೊಸೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರುದಾರ ವಿನೋದ್ ಅವರಿಗೆ ಲೋಕಾಯುಕ್ತ ಕಚೇರಿಗೆ ಹಾಜರಾಗಿ ದೂರಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ನೀಡುವಂತೆ ನೋಟಿಸ್ ನೀಡಲಾಗಿದೆ.
ದೂರುದಾರ ವಿನೋದ್ ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಕೀಲ ವಿನೋದ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೂರು ತಿಂಗಳಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ನೀಡಲು ಹೇಳಿತ್ತು. ಮೂರು ತಿಂಗಳ ಅವಧಿಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ದೂರು ದಾಖಲಾಗಿದೆ. ಇನ್ನು ಲೋಕಾಯುಕ್ತರು ಯಾವಾಗ ದಾಳಿ ನಡೆಸಿ ವರದಿ ನೀಡುತ್ತಾರೆ ಎಂಬುದೇ ಕುತೂಹಲವಾಗಿದೆ ಎಂದಿದ್ದಾರೆ. ಈಶ್ವರಪ್ಪನವರ ಮನೆಯ ಮೇಲೆ ನಾಳೆ ಲೋಕಾಯುಕ್ತ ದಾಳಿ ಆಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
WhatsApp Number : 7795829207
Leave a Reply