ಶಿವಮೊಗ್ಗ: ಸಾಗರ ತಾಲೂಕಿನ ಮಹತ್ವದ ಹಸಿರುಮಕ್ಕಿ ಸೇತುವೆ ಕಾಮಗಾರಿಯನ್ನು ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಇಂದು (ಶುಕ್ರವಾರ) ಜಂಟಿಯಾಗಿ ಪರಿಶೀಲಿಸಿದರು. ಈ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, ಅಂಬಾರಕೊಡ್ಡು-ಕಳಸವಳ್ಳಿಯ ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃ ಪ್ರಸನ್ನ ಕೆರೆಕೈ ಎಂದು ಸ್ಮರಿಸಿದ್ದು ವಿಶೇಷವಾಗಿತ್ತು.
ಸೇತುವೆ ನಿರ್ಮಾಣ ವಿಳಂಬಕ್ಕೆ ಬಿಜೆಪಿ ಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು
ಮೊದಲಿಗೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕಾಗೋಡು ತಿಮ್ಮಪ್ಪನವರು ಸಚಿವರಾಗಿದ್ದಾಗ ಹಸಿರುಮಕ್ಕಿ ಸೇತುವೆ ಮಂಜೂರಾಗಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಈ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿತು. ಕೇವಲ 38 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ತಾಂತ್ರಿಕ ದೋಷದ ನೆಪವೊಡ್ಡಿ ಕಾಮಗಾರಿ ಸ್ಥಗಿತಗೊಂಡಿತ್ತು ಎಂದು ಆರೋಪಿಸಿದರು. ನಾನು ಬೆಳಗಾವಿ ಅಧಿವೇಶನದ ನಂತರ 48 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿದ್ದೇನೆ ಎಂದ ಅವರು, ಇನ್ನೂ 16 ಮೀಟರ್ ಕಾಮಗಾರಿ ಬಾಕಿ ಇದೆ. ಮಳೆಗಾಲದಲ್ಲಿ ತೊಂದರೆಯಾಗಿದ್ದು, ವಿಳಂಬವಾಗಿದೆ ಎಂದು ಮಾಹಿತಿ ನೀಡಿದರು.ಕಳಸವಳ್ಳಿ ಸೇತುವೆ ನಿರ್ಮಾಣವೂ ವಿಳಂಬವಾಗಲು ಸಂಸದರೇ ಕಾರಣ. ಅವರು ಈ ಸೇತುವೆ ಬಗ್ಗೆ ಗಮನ ಹರಿಸಲಿಲ್ಲ. ತುಮರಿ ಭಾಗದ ಜನರಿಗೆ ಅನುಕೂಲವಾಗಬೇಕಿರುವ ಈ ಸೇತುವೆಯನ್ನು 2026ರ ಮೇ ತಿಂಗಳೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಇದನ್ನು ಓದಿ : ಶಿವಮೊಗ್ಗ : ಐ ಆಮ್ ಸಾರಿ ಅಪ್ಪ ಅಮ್ಮ ಎಂದು ಡೆತ್ ನೋಟ್ ಬರೆದಿಟ್ಟು ಮದುವೆಯಾದ ಮೊದಲ ವರ್ಷದಲ್ಲೇ ಯುವಕ ಆತ್ಮಹತ್ಯೆ!! – ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
“ಬಿಜೆಪಿಗೆ ಒಂದು ಬ್ರಿಡ್ಜ್ ಟಾರ್ಗೆಟ್ ಇರಬಹುದು, ನಮಗೆ ಎರಡೂ ಸೇತುವೆ ಬೇಕು”: ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ ಮಾತನಾಡಿ, ಸೇತುವೆ ಪರಿಶೀಲನೆಗೆ ಬಂದಿದ್ದೇವೆ. ನಮ್ಮ ಸರ್ಕಾರ ಬಂದ ನಂತರವೇ ಈ ಕಾಮಗಾರಿಗೆ ಮರು ಚಾಲನೆ ನೀಡಲಾಗಿದೆ. ಬಿಜೆಪಿಗೆ ಬಹುಶಃ ಒಂದು ಸೇತುವೆ ನಿರ್ಮಿಸುವ ಗುರಿ ಇರಬಹುದು, ಆದರೆ ನಮಗೆ ಎರಡೂ ಸೇತುವೆಗಳು ಬೇಕು. ಬಾಕಿ ಇರುವ 25 ಕೋಟಿ ರೂ. ಅನ್ನು ಬಿಡುಗಡೆ ಮಾಡಲಾಗುವುದು ಎಂದರು.
ನಾನು ಅಥವಾ ಅವರು ಯಾರೂ ನಮ್ಮ ಮನೆಯಿಂದ ಹಣ ತರುವುದಿಲ್ಲ.
ಇದು ಜನರ ತೆರಿಗೆ ಹಣ. ಭೂಮಿ ಯಾರದ್ದು? ಕೇಂದ್ರ ಜಾಗ ಕೊಡುತ್ತಾ? ರಾಜ್ಯ ಸರ್ಕಾರವೇ ಕೊಡುತ್ತದೆ. ಇದನ್ನು ವಿಭಜಿಸಿ ನೋಡಬಾರದು. ನಾಲ್ಕೈದು ಪಿಲ್ಲರ್‌ಗಳು ಮುಗಿದರೆ ಹಸಿರುಮಕ್ಕಿ ಸೇತುವೆ ಸಂಪೂರ್ಣಗೊಳ್ಳುತ್ತದೆ” ಎಂದು ಸಚಿವರು ಹೇಳಿದರು.
ಕಳಸವಳ್ಳಿ ಸೇತುವೆ 2.13 ಮೀಟರ್ ಉದ್ದವಿದ್ದು, 435 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದು ವಿಮಾನ ನಿಲ್ದಾಣದಂತೆ ವಿಳಂಬವಾಗದಿರಲಿ ಎಂದು ಆಶಿಸಿದರು. ಹಸಿರುಮಕ್ಕಿ ಸೇತುವೆ 125 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಕರಾವಳಿ ಮತ್ತು ಮಲೆನಾಡಿನ ಸಾಗರ ಭಾಗದ ಜನರಿಗೆ ಸಂಪರ್ಕ ಕಲ್ಪಿಸುತ್ತದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ: ಬಿಜೆಪಿ ವಿರುದ್ಧ ಆಕ್ರೋಶ
ಸಚಿವರು ಮಾತನಾಡಿ, ಅಣ್ಣತಮ್ಮಂದಿರಿಗೆ ಒಂದು ಕೆಟ್ಟ ಚಾಳಿ ಇದೆ. ಸರ್ಕಾರದ ಹಣವೆಲ್ಲಾ ಸಾರ್ವಜನಿಕರದ್ದು. ಕಾಗೋಡು ತಿಮ್ಮಪ್ಪನವರು ಭೂಮಿಪೂಜೆ ಮಾಡದಿದ್ದರೆ ಈ ಸೇತುವೆಗೆ ಮತ್ತೆ ಹೋರಾಟ ಮಾಡಬೇಕಿತ್ತು. ಸಿಗಂದೂರು ಸೇತುವೆಯ ನಿಜವಾದ ನಿರ್ಮಾತೃ ಪ್ರಸನ್ನ ಕೆರೆಕೈ ಎಂದು ನೆನಪಿಸಿಕೊಂಡಿದ್ದು ವಿಶೇಷ.
“ಗಡ್ಕರಿ, ನರೇಂದ್ರ ಮೋದಿಯನ್ನಾದರೂ ಕರೆಯಿಸಲಿ ಅಥವಾ ಮೋದಿಯ ಸ್ನೇಹಿತ ಟ್ರಂಪ್‌ರನ್ನಾದರೂ ಕರೆಯಿಸಲಿ. ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ” ಎಂದು ಸವಾಲೆಸೆದರು.
ಕೋಳೂರು ಶಾಲೆಯನ್ನು ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ ಸಚಿವರು, ಶರಾವತಿ ಮುಳುಗಡೆ ಸಂತ್ರಸ್ತರ ಬ್ಲಾಕ್ ಸರ್ವೇಗಾಗಿ ಜನ ಒತ್ತಾಯಿಸುತ್ತಿದ್ದಾರೆ. ಜನರಿಗೆ ನಮ್ಮಿಂದ ತೊಂದರೆಯಾಗಲು ನಾವು ಬಿಡುವುದಿಲ್ಲ. ಅವರ ಸಮಸ್ಯೆಯನ್ನು ಉಲ್ಬಣಗೊಳಿಸಿದ್ದು ಬಿಜೆಪಿ ಪಕ್ಷ ಎಂದು ದೂರಿದರು. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು. ಹೇಳಿದಂತೆ ನಾವು ನಡೆಯುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
WhatsApp Number : 7795829207
Leave a Reply