ಸಾಗರ: ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಮನಸ್ಥಿತಿ ಇಲ್ಲದವರಿಗೆ ಸಂವಿಧಾನದ ಮೌಲ್ಯಗಳನ್ನು ಪ್ರತಿಪಾದಿಸುವ ಹಕ್ಕು ಕೂಡ ಇಲ್ಲ ಎಂದು ಹಿರಿಯ ಬರಹಗಾರ ದು.ಗು.ಲಕ್ಷ್ಮಣ್ ಸ್ಪಷ್ಟವಾಗಿ ಹೇಳಿದರು.
ಇಲ್ಲಿನ ಅಜಿತ ಸಭಾಭವನದಲ್ಲಿ ಸೇವಾ ಸಾಗರ ಬಳಗ ಭಾನುವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಜೈಲು ಸೇರಿದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಬ್ಬಗೆಯ ನೀತಿಗೆ ಟೀಕೆ:
“ಮಾತೆತ್ತಿದರೆ ಕೆಲವರು ಸಂವಿಧಾನದ ಆಶಯಗಳನ್ನೇ ಎತ್ತಿ ತಮ್ಮ ವಾದವನ್ನು ಮಂಡಿಸುತ್ತಾರೆ. ಆದರೆ, ತುರ್ತು ಪರಿಸ್ಥಿತಿಯ ವಿಷಯ ಬಂದರೆ ಮಾತ್ರ ಮೌನ ವಹಿಸುತ್ತಾರೆ. ಇಂತಹ ಇಬ್ಬಗೆಯ ನೀತಿಯಿಂದಲೇ ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ” ಎಂದು ದು.ಗು.ಲಕ್ಷ್ಮಣ್ ತೀವ್ರವಾಗಿ ಟೀಕಿಸಿದರು.
ತುರ್ತು ಪರಿಸ್ಥಿತಿ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದವರನ್ನು ಕೂಡ ಜೈಲಿಗೆ ಕಳುಹಿಸಿ, ಚಿತ್ರಹಿಂಸೆ ನೀಡಿದ್ದು ಕಾಂಗ್ರೆಸ್ನ ಕರಾಳ ಇತಿಹಾಸವಾಗಿದೆ ಎಂದು ಅವರು ಬಣ್ಣಿಸಿದರು. “ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಅಂದು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವದ ಪರ ಧ್ವನಿ ಎತ್ತಿದ ದೇಶಭಕ್ತರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ ಶಂಕರ ನಾರಾಯಣ ಭಟ್ಟ ಚಿಕ್ಕಬಿಲಗುಂಜಿ, ಎಚ್.ಸಿ.ಜಗದೀಶ್, ಶ್ರೀನಿವಾಸ ಬೇದೂರು, ದು.ಗು.ಲಕ್ಷ್ಮಣ್, ಕೆ.ಜಿ.ರಾಮರಾವ್, ಕಮಲಾಕ್ಷಮ್ಮ ಕಾನುಗೋಡು ಅವರನ್ನು ಸನ್ಮಾನಿಸಲಾಯಿತು.
ಜಾಹಿರಾತು:
ಪುಸ್ತಕಗಳ ಬಿಡುಗಡೆ:
ದು.ಗು.ಲಕ್ಷ್ಮಣ್ ಸಂಪಾದಕತ್ವದ ‘ಕಾಂಗ್ರೆಸ್ ಕರಾಳ ಕತೆ’ ಮತ್ತು ಹೊ.ವೆ. ಶೇಷಾದ್ರಿ ಸಂಪಾದಕತ್ವದ ‘ಭುಗಿಲು’ ಕೃತಿಗಳನ್ನು ಸೇವಾ ಸಾಗರ ಸಂಸ್ಥೆಯ ಕಾರ್ಯದರ್ಶಿ ಗೋಪಾಲಕೃಷ್ಣ ಬಿಡುಗಡೆ ಮಾಡಿದರು.
ಯು.ಎಚ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಅಬಸೆ ದಿನೇಶ್ ಕುಮಾರ್ ಜೋಷಿ, ಟಿ.ಡಿ.ಮೇಘರಾಜ್, ಮ.ಸ.ನಂಜುಂಡಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
WhatsApp Number : 7795829207
Leave a Reply