ಸಾಗರ: ಸಾಗರ ನಗರದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ವರದಿಯಾಗಿದೆ. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿದ ಮೂವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜುಲೈ 7ರ ಮಧ್ಯಾಹ್ನ 12 ಗಂಟೆಗೆ, ಸೊರಬದ ಕಾನಕೇರಿ ನಿವಾಸಿಯಾದ 19 ವರ್ಷದ ಯುವತಿಯೊಬ್ಬರು, ಸಾಗರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ತೆರಳಲು ತಮ್ಮ ಪರಿಚಯದ ಸ್ಪಂದನ್ ಎಂಬ ಯುವಕನೊಂದಿಗೆ ಸಾಗರದ ಯಡವರಸೆ ರೈಲ್ವೆ ಗೇಟ್ ಬಳಿ ಬೈಕಿನಲ್ಲಿ ಸಾಗುತ್ತಿದ್ದರು. ಈ ವೇಳೆ, ಆರು ಅಪರಿಚಿತರು (ನಾಲ್ವರು ಬೈಕಿನಲ್ಲಿ, ಇಬ್ಬರು ಓಮಿನಿಯಲ್ಲಿ) ಅವರನ್ನು ಅಡ್ಡಗಟ್ಟಿದ್ದಾರೆ.
ಘಟನೆಯ ವಿವರ:
ಅಡ್ಡಹಾಕಿದ ಅಪರಿಚಿತರಿಗೆ ಯುವಕ-ಯುವತಿ ಪ್ರಶ್ನಿಸಿದಾಗ, “ನಾವು ಯಾರಾದರೆನು? ಹಿಂದೂ ಹುಡುಗನ ಜೊತೆ ನಿನ್ನದೇನು ಕೆಲಸ? ಅವನ ಜೊತೆ ಬೈಕಿನಲ್ಲಿ ಏಕೆ ಹೋಗುತ್ತಿದ್ದೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಯುವತಿಯ ಕೈ ಬೆರಳುಗಳನ್ನು ಹಿಡಿದು ತಿರುಚಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಬಂಧಿತರು ಯುವಕ-ಯುವತಿಯರನ್ನು ಬೈಕಿನಲ್ಲಿ ಕೂರಿಸಿಕೊಂಡು ಎಲಗಡಲೆ ದರ್ಗಾ ಹಾಗೂ ನಂತರ ಸಾಗರದ ರಾಮನಗರದ ಮಸೀದಿಗೂ ಕರೆದೊಯ್ದು ಸ್ಪಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿಯೂ ಇಬ್ಬರನ್ನೂ ನಿಂದಿಸಿ, ಯುವತಿಯ ತಾಯಿಯ ದೂರವಾಣಿ ಸಂಖ್ಯೆ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಾಗರ ಪೊಲೀಸರು ತಕ್ಷಣ ಯುವಕ-ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಬಂಧನ ಮತ್ತು ಡಿವೈಎಸ್‌ಪಿ ಎಚ್ಚರಿಕೆ:
ಅಪಹರಣ, ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್.ಎನ್. ನಗರ ನಿವಾಸಿಗಳಾದ 65 ವರ್ಷದ ಶಬೀರ್, 24 ವರ್ಷದ ಅರ್ಬಾಜ್ ಮತ್ತು 25 ವರ್ಷದ ಆಫ್ರಾಜ್ ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ನಾಲೈದು ಜನರನ್ನು ಬಂಧಿಸಬೇಕಿದೆ ಎಂದು ಸಾಗರದ ಡಿವೈಎಸ್‌ಪಿ ತಿಳಿಸಿದ್ದಾರೆ. “ಯಾವುದೇ ಧರ್ಮ ಅಥವಾ ಪಂಗಡಕ್ಕೆ ಸೇರಿದವರಾಗಿದ್ದರೂ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ, ಹಲ್ಲೆ ನಡೆಸುವ ಅಥವಾ ನೈತಿಕ ಪೊಲೀಸ್ ಗಿರಿ ಮೆರೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಕಾನೂನಿಗೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply