ಏಡಿ, ಕಾರೇಡಿ @ ಕಲ್ಲೇಡಿ (BLACK CRAB) ತಿನ್ನಲು ಬಲುರುಚಿ. ಅದರಲ್ಲೂ ಆ ಕೊಂಬುಗಳ ಮಧ್ಯೆ ಇರುವ ಬಿಳಿ ಹಳದಿ ಮಿಶ್ರಿತ ಬಣ್ಣದ ಮಾಂಸ, ಆ ಕೊಂಬು ತುದಿಯಿಂದ ಚೀಪಿದಾಗ ಆಹಾ ಎಂತಹ ರುಚಿ! ಬಣ್ಣಿಸಲು ಪದಗಳೇ ಸಾಲದು.
ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು??
ಬಹಳ ವರ್ಷಗಳ ನಂತರ ಒಳ್ಳೆಯ ಕಾರೇಡಿಯನ್ನು ತಿಂದೆ. ಹಕ್ಕಿ ಪಿಕ್ಕಿ ಕ್ಯಾಂಪಿನ ಪರಿಚಿತ ಪುನ್ನಿಗ ಎಂಬುವವರು ತಂದುಕೊಟ್ಟಿದ್ದರು. ಈ ಏಡಿ ತಿನ್ನುತ್ತಿದ್ದ ಹಾಗೆ ನನಗೆ 30 ವರ್ಷಗಳ ಹಿಂದಿನ ನೆನಪುಗಳು ಕಣ್ಣ ಮುಂದೆ ಬಂದು ಹೋದವು.
ತೋಟದ ಕಪ್ಪು ಹೆರೆಯಲು ಹೋದಾಗ ಏಡಿ ಹಿಡಿದು ಕೊಂಬು, ಕಾಲುಗಳನ್ನು ಮುರಿದು ಸ್ಥಳದಲ್ಲಿಯೇ ಜೀರಿಗೆ, ಮೆಣಸು, ಉಪ್ಪು ಹಾಕಿ ಸುಟ್ಟು ತಿಂದಿದ್ದು; ಅಬ್ಬಾ ಆ ರುಚಿಯ ಅನುಭವವೇ ಬೇರೆ!
ಇದನ್ನು ಓದಿ : ಸಿಗಂದೂರು ಲಾಂಚ್‌ಗಳು ಇನ್ನು ಬೋಟ್ ಹೋಟೆಲ್‌ಗಳು! ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!
ಜಾಹಿರಾತು:
ಇದನ್ನು ಓದಿ: ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!
ಮನೆಯಲ್ಲಿ ಅಪ್ಪಾ ಮತ್ತು ಅಣ್ಣ ಸೇರಿ ಮಾಡಿದ್ದ ಬಿದಿರಿನ ಒಂದು ಕೂಣಿ ಇತ್ತು. ಇದರಲ್ಲಿ ಏಡಿ ಮಾತ್ರವಲ್ಲ, ಆಗಾಗ ಬರುವ ನಾಗರ ಹಾವನ್ನು ಕೂಡ ಹಿಡಿಯಲಾಗುತ್ತಿತ್ತು. ಬಾಡೂಟ ಇಲ್ಲದೆ ಅನ್ನ ಗಂಟಲಿಂದ ಕೆಳಗಿಳಿಯದ ನಮ್ಮಗಳ ಮನೆಯಲ್ಲಿ ಹೊಲಸಿನ ಗಡಿಗೆಗೆ ಬಿಡುವೆ ಇರಲಿಲ್ಲ (ನಾನ್ ವೆಜ್ ಮಾಡುವ ಪಾತ್ರೆ). ವಾರದಲ್ಲಿ ಎರಡರಿಂದ ಮೂರು ಕೋಳಿ ತಲೆ ಉರುಳುತ್ತಿದ್ದವು, ಮಧ್ಯದಲ್ಲಿ ಆಗಾಗ ಶಿಕಾರಿ ಮಾಂಸ, ಮಂಗಳವಾರವಂತು ಸಂತೆಯ ಮೀನು ಗ್ಯಾರಂಟಿ.
ಇದನ್ನು ಓದಿ: ಕ್ರೆಡಿಟ್ ಕಾರ್ಡ್‌ನ ಕೈ ಹಿಡಿಯುವ ಮುನ್ನ… ಲಾಭ-ನಷ್ಟದ ಲೆಕ್ಕಾಚಾರ ಇಲ್ಲಿದೆ!
ಈ ರೀತಿ ಮಾಂಸ, ಮೀನು ಮಾಡಿದ ಮಾರನೆ ದಿನ ಕೋಳಿಯ ಪಚ್ಚಿ, ಮೀನಿನ ಪಚ್ಚಿ (ವೇಸ್ಟ್) ಗಳನ್ನು ಸಂಗ್ರಹಿಸಿಟ್ಟು ಅದನ್ನು ಕೂಣಿಯ ಒಳಗೆ ಹುಲ್ಲು ಅಥವಾ ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ, ಕೂಣಿಯನ್ನು ಕೆರೆಗೆ ಅಥವಾ ತೋಟದ ಹೆಗ್ಗಪ್ಪು (ನೀರಿನ ಕಾಲುವೆ) ಯಲ್ಲಿ ರಾತ್ರಿ ಇಟ್ಟು ಬಂದರೆ, ಬೆಳಗಾಗುವುದರೊಳಗೆ ಕೂಣಿ ತುಂಬುವಷ್ಟು ಏಡಿಗಳು ಮತ್ತು ಚಿಕ್ಕ ಪುಟ್ಟ ಮೀನುಗಳು ಅದರಲ್ಲಿ ಬಿದ್ದಿರುತ್ತಿದ್ದವು.
ಬೆಳಿಗ್ಗೆ ಎದ್ದು ಕೂಣಿ ವಾಪಾಸು ತರಲು ಹೋಗಬೇಕಿತ್ತು. ಅದನ್ನು ವಾಪಾಸು ಹೊತ್ತುಕೊಂಡು ಬರುವಾಗ ಪ್ಲಾಸ್ಟಿಕ್ ಗೊಪ್ಪೆ, ಕಂಬಳಿಗೊಪ್ಪೆ, ಅಥವಾ ಗೋಣಿ ಗೊಪ್ಪೆಯಾದರೂ ಹಾಕಿಕೊಳ್ಳಬೇಕಿತ್ತು, ಇಲ್ಲದಿದ್ದರೆ ಏಡಿ ಮೀನಿಗಾಗಿ ಕೂಣಿ ಒಳಗೆ ಸೇರಿದ್ದ ಗಲೀಜಿನ ನೀರು ಮೈ ತುಂಬಾ ಇಳಿಯುತ್ತಿತ್ತು. ಇದರ ನಡುವೆ ಏಡಿ ಮೀನಿಗಾಗಿ ಕಟ್ಟಿದ ವೇಸ್ಟ್‌ನ ದುರ್ವಾಸನೆಗೆ ‘ಆ ಮೀನು ಬೇಡ, ಏಡಿಯು ಬೇಡ’ ಅನುವಂತೆ ಅನಿಸಿದರೂ, ಕೂಣಿಯ ಒಳಗಿರುವ ಮೀನು ಮತ್ತು ಏಡಿ ನೋಡಿದ ಖುಶಿಯಲ್ಲಿ ದುರ್ವಾಸನೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಕೆಲಸಕ್ಕೆ ಬರುವವರು ಈ ಕೂಣಿ ತರಲು ಮಾತ್ರ “ನಮ್ಮಿಂದ ಆಗೊಲ್ಲ ಗೌಡ್ರೆ” ಅಂತ ಮುಖ ಮುರಿದು ನಿಷ್ಟೂರವಾಗಿ ಉತ್ತರಿಸುತ್ತಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ತಂದ ಏಡಿಯ ಸಾರು ಮಾಡಿ ಅಕ್ಕಿ ರೊಟ್ಟಿ ಮಾಡಿದರೆ ಆಹಾ.. ಸ್ವರ್ಗಕ್ಕೆ ಮೂರೆ ಗೇಣು ಅನ್ನಿಸುತ್ತಿತ್ತು.
ಇದನ್ನು ಓದಿ: ಡಾ. ವಿಷ್ಣುವರ್ಧನ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ನಿರ್ದೇಶಕ ಅನಿರುದ್ಧ ಜತ್ಕರ್ ಮನವಿ!
ಮೊದಲೆಲ್ಲ ಅಡಿಕೆ ತೋಟದ ಕಪ್ಪಿನಲ್ಲಿ ಏಡಿಗಳ ರಾಶಿಯೇ ಇದ್ದವು. ಬೆಳ್ಳೆಡಿಗಳು ಮೊದಲು ಭತ್ತದ ಸಸಿಗಳನ್ನು ಕತ್ತರಿಸುತ್ತಿದ್ದು, ಅವು ಗದ್ದೆ ಅಂಚುಗಳಲ್ಲಿ ಎಲ್ಲಿ ನೋಡಿದರು ಗುದ್ದಿನಲ್ಲಿ ಕಾಣುತ್ತಿದ್ದವು. ಅಲ್ಲಲ್ಲಿ ಗುಮ್ಮನ ಹಕ್ಕಿಗಳು ಈ ಬೆಳ್ಳೆಡಿಗಳನ್ನು ತಿಂದು ಹಾಕುತ್ತಿದ್ದವು. ಕಾರೇಡಿಗಳು ಕಾಲಕ್ರಮೇಣ ಚಿಕ್ಕ ಅಡಿಕೆ ಸಸಿಯ ರಂಬೆ ಕತ್ತರಿಸಲು ಆರಂಭಿಸಿದವು. ಇದನ್ನು ನಿಯಂತ್ರಿಸಲು ಕೆಲವರು ಟಿಮೆಟ್ ಅನ್ನು ಸಸಿಗಳ ಬುಡದಲ್ಲಿ ಇಟ್ಟಿದ್ದರಿಂದ ಮತ್ತು ನಿರಂತರ ಕಳೆ ನಾಶಕಗಳ ಸಿಂಪರಣೆಯಿಂದ ತೋಟದ ಕಪ್ಪಿನಲ್ಲಿ ಹರಿದಾಡುತ್ತಿದ್ದ, ಗುದ್ದುಗಳಿಗೆ ಕೈ ಹಾಕಿದೊಡನೆ ಹಿಂಡು ಹಿಂಡೆ ಸಿಗುತ್ತಿದ್ದ ಏಡಿಗಳು ಈಗ ಗಣನೀಯವಾಗಿ ಕ್ಷೀಣಿಸಿವೆ.
ಈಗ ಹೊಳೆ, ಚಾನಲ್‌ಗಳಲ್ಲಿ ಸಿಗುವ ನೈಸರ್ಗಿಕವಾಗಿರುವ ಏಡಿಗಳ ಜೊತೆ, ಫಾರ್ಮ್‌ಗಳಲ್ಲಿಯೂ ಏಡಿಯನ್ನು ಸಾಕಿ, ಏಡಿ ಕೃಷಿ ಮಾಡುವವರು ಕಲಬೆರಕೆ ಏಡಿಗಳನ್ನು ಮಾರ್ಕೆಟ್‌ಗಳಿಗೆ ಕಳುಹಿಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಎಷ್ಟೊಂದು ಮಾರಕವೋ? ಇದೊಂದು ಆಧುನಿಕತೆಯ ದುರಂತ.
ನೈಸರ್ಗಿಕವಾಗಿ ಸಿಗುವ ಏಡಿಗಳು ಆರೋಗ್ಯಕ್ಕೆ ಪೂರಕವಾಗಿವೆ. ಈ ಏಡಿ ತಿಂದರೆ ಜ್ವರ ಗಡ್ಡೆ ಕರಗುತ್ತದೆ ಎಂದು ಹೇಳುತ್ತಿದ್ದರು, ಈ ಬಗ್ಗೆ ನನಗೆ ಪಕ್ಕಾ ಮಾಹಿತಿಯಿಲ್ಲ. ಈ ಏಡಿಗಳ ಸಂತತಿ ಇನ್ನೂ ಹೆಚ್ಚಾಗಿ ನಮ್ಮಗಳಿಗೆ ಇನ್ನೂ ಹೆಚ್ಚು ತಿನ್ನುವ ಭಾಗ್ಯ ಲಭಿಸಲಿ.
– ಕೆ.ಪಿ.ಶ್ರೀಪಾಲ.
ಜಾಹಿರಾತು:
ಸುದ್ದಿ ಮತ್ತು ಜಾಹಿರಾತಿಗಾಗಿ ಈ ನಂಬರ್ ಸಂಪರ್ಕಿಸಿ : 7795829207
Leave a Reply