” ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಹಣ ಬರಲ್ಲ ” ಸುಳ್ಳು ವದಂತಿ ನಂಬಿ ಗ್ಯಾಸ್ ಏಜೆನ್ಸಿಗಳ ಮುಂದೆ ಸಾಲು ಗಟ್ಟಿ ನಿಂತ ಸಾರ್ವಜನಿಕರು !
ಶಿವಮೊಗ್ಗ : ಗೃಹೋಪಯೋಗಿ ಅನಿಲ ಸಂಪರ್ಕ ಹೊಂದಿರುವವರು ಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿ ನಂಬಿದ ಗ್ರಾಹಕರು ಮಂಗಳವಾರದಿಂದ ನಗರದ ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ. ಬೆಳಗ್ಗೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಜನರ ದಂಡೇ ನೆರೆದಿತ್ತು. ಎಲ್ಲರೂ ಆಧಾರ್‌ಕಾರ್ಡ್ಗಳೊಂದಿಗೆ ಧಾವಿಸಿದ್ದರು. ಕೆವೈಸಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿಲ್ಲಿಸಲಾಗುತ್ತದೆ. ಜೊತೆಗೆ ಈ ಸಂಪರ್ಕವನ್ನು ವಾಣಿಜ್ಯ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು.
ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿಯ ಸುದ್ದಿ ಹರಡಿ ಅಲ್ಲಿಯೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ನೆರೆದಿದ್ದರು. ಈ ವಾರ ಶಿವಮೊಗ್ಗದಲ್ಲಿ ಅದೇ ರೀತಿ ಜನ ಏಜೆನಿಗಳ ಎದುರು ಜಮಾಯಿಸಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ಕೆಲವು ಗ್ಯಾಸ್ ಏಜೆನ್ಸಿಗಳು ಕಂಗಾಲಾಗಿದ್ದವು. ಈ ಸಂಬಂಧ ಪೂರಕ ಸಿದ್ಧತೆ ಮಾಡಿಕೊಳ್ಳದೇ ಇದ್ದುದರಿಂದ ಪರದಾಡುವಂತಾಯಿತು. ಬಳಿಕ ಅಗತ್ಯ ವ್ಯವಸ್ಥೆ ಮಾಡಿಕೊಂಡು, ಕೆವೈಸಿ ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. , ಕೆವೈಸಿ ಮಾಡಿಸದಿದ್ದರೆ ಸಂಪರ್ಕ ರದ್ದಾಗುತ್ತದೆ ಎಂದಾಗಲಿ, ವಾಣಿಜ್ಯ ಸಂಪರ್ಕಕ್ಕೆ ಸಂಪರ್ಕ ಬದಲಾಗುತ್ತದೆ ಎಂಬುದೆಲ್ಲ ಸುಳ್ಳು ಸುದ್ದಿ ಆದರೆ ಅಕ್ರಮ ತಡೆಯಲು ಇ-ಕೆವೈಸಿ ಅಗತ್ಯ
ಕೇಂದ್ರ ಪೆಟ್ರೋಲಿಯಂ ಇಲಾಖೆಯಿಂದ ಎಲ್ಲ ಗ್ರಾಹಕರ ಇ ಕೆವೈಸಿ ಮಾಡಿಸಿ ಎಂದು ಆದೇಶ ಬಂದಿದ್ದು, ಅದರಂತೆ ಎಲ್ಲರ ಇ ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್ ಸಿಲಿಂಡರ್ ವಿತರಕ ಕಂಪನಿಯ ಅಧಿಕಾರಿಗಳು ಕಳೆದ ಒಂದೆರಡು ವಾರದ ಹಿಂದೆ ತಮ್ಮ ವಿತರಕರಿಗೆ ಸೂಚನೆ ನೀಡಿದ್ದಾರೆ.
ನಗರ ಸೇರಿ ಗ್ರಾಮೀಣ ಭಾಗಗಳಲ್ಲಿನ ಗ್ಯಾಸ್ ಸಿಲಿಂಡರ್ ವಿತರಕ ಏಜೆನ್ಸಿಗಳ ಬಳಿ ಜನರು ಬೆಳಗಿನಿಂದಲೇ ಸಾಲಿನಲ್ಲಿಬಂದು ನಿಲ್ಲುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ನಿತ್ಯ ಒಂದು ಏಜೆನ್ಸಿ ಬಳಿ 30-40 ಜನರ ಇ ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಗ್ಯಾಸ್ ವಿತರಕರೊಬ್ಬರು.
ಅಕ್ರಮ ತಡೆಯಲು ಇ-ಕೆವೈಸಿ?
ಕೇಂದ್ರ ಸರಕಾರ ಉಜ್ವಲ ಯೋಜನೆಯಲ್ಲಿ ಕಡಿಮೆ ದರದಲ್ಲಿ ಬಡವರಿಗೆ ಸಿಲಿಂಡರ್ ನೀಡಲಾಗುತ್ತಿದೆ. ಇದರ ಜತೆಗೆ ಐದು ರಾಜ್ಯಗಳ ಚುನಾವಣೆಗೂ ಮುನ್ನ ಸಿಲಿಂಡರ್ ದರದಲ್ಲಿ200ರೂ. ಗಳ ಸಬ್ಸಿಡಿ ನೀಡಲಾಗಿತ್ತು. ಈ ವೇಳೆ ಹಲವು ಕಡೆ ಉಜ್ವಲ ಮತ್ತು ಸಬ್ಸಿಡಿ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರು ಇದೆ. ಅದನ್ನು ತಡೆಗಟ್ಟಲು ಇ-ಕೆವೈಸಿ ಮಾಡಿಸಿ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಸೂಚನೆ ನೀಡಿರಬಹುದು ಎಂದು ಕೆಲ ವಿತರಕರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ ಪಕ್ಕಾ ಯಾವುದೇ ಮಾಹಿತಿ ಇಲ್ಲಎಂದು ಹೇಳುತ್ತಾರೆ.
ಆದರೆ ಕೆವೈಸಿ ಮಾಡಿಸುವುದು ಒಳ್ಳೆಯದು. ಇದರಿಂದ ಮುಂದಿನ ದಿನಗಳ ದಾಖಲಾತಿ ಸಂಗ್ರಹವಾದಂತಾ ಗುತ್ತದೆ. ಜೊತೆಗೆ ನಕಲಿ ಸಂಪರ್ಕಗಳು, ಇದ್ದರೆ ಅವೆಲ್ಲ ಸಹಜವಾಗಿಯೇ ರದ್ದಾಗುವಂತಾಗುತ್ತದೆ ಎಂದ ಅವರು, ಆಗಮಿಸಿದ್ದ ಎಲ್ಲರಿಗೂ ಕೆವೈಸಿ ಮಾಡಿಕೊಡಲಾಗುತ್ತಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply