ಹೊಸ ಉದ್ಯಮಗಳಲ್ಲಿ ಯಶಸ್ಸು ಸಿಗಲಿ – ಶಾಸಕ ಎಸ್.ಎನ್.ಚನ್ನಬಸಪ್ಪ
ಶಿವಮೊಗ್ಗ: ಯುವಜನರು ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಅತ್ಯಂತ ಮುಖ್ಯ. ಹೊಸ ಹೊಸ ಉದ್ಯಮಗಳನ್ನು ಆರಂಭಿಸುವವರಿಗೆ ಅಗತ್ಯ ಯಶಸ್ಸು ಸಿಗುವಂತಾಗಲಿ ಎಂದು ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಥುರಾ ಪಾರಾಡೈಸ್ನ ಮೊದಲ ಮಹಡಿಯಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರ ಪುತ್ರ ಮುಕುಂದ್ ಅವರ ಸಂಸ್ಥೆಯ “ಮೈರಿಯಾಡ್ ಆರ್ಕಿಟೆಕ್ಟ್” ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನರು ಹೊಸ ಸಂಸ್ಥೆ, ಉದ್ಯಮಗಳ ಸ್ಥಾಪನೆ ಮಾಡುವುದರಿಂದ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಠಿ ಆಗುತ್ತದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆ. ಮುಕುಂದ್ ಅವರ ಆಲೋಚನೆ ಹಾಗೂ ಉದ್ಯಮದಲ್ಲಿ ಯಶಸ್ಸು ಸಾಧಿಸಲಿ ಎಂದು ಆಶಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಶಿವಮೊಗ್ಗ ಜಿಲ್ಲೆಯು ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಠಿಸುವ ಸಂಪನ್ಮೂಲ ಹೊಂದಿದ್ದು, ಯುವಜನರು ಸ್ಥಳೀಯವಾಗಿ ಉದ್ಯಮ ಆರಂಭಿಸುವುದರಿಂದ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉದ್ಯಮಿ ಮುಕುಂದ್ ಮಾತನಾಡಿ, ಆರ್ಕಿಟೆಕ್ಟ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಮಾಹಿತಿ ಕೊರತೆಯಿಂದ ಆರ್ಕಿಟೆಕ್ಟ್ ಕ್ಷೇತ್ರದ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ಇಲ್ಲ. ಆರ್ಕಿಟೆಕ್ಟ್ ಎಂದರೆ ಅತಿ ಹೆಚ್ಚಿನ ಹಣ ವಿನಿಯೋಗ ಮಾಡಬೇಕು ಎಂಬ ತಪ್ಪು ಕಲ್ಪನೆ ಇದೆ. ಸಮರ್ಪಕ ಹಣ ನಿರ್ವಹಣೆ ಜತೆ ಅತ್ಯಂತ ಸುಂದರವಾದ ಮನೆ ನಿರ್ಮಾಣ ಮಾಡುವುದು ಆರ್ಕಿಟೆಕ್ಟ್ ಗಳ ಕೆಲಸ ಎಂದು ತಿಳಿಸಿದರು.
ಉದ್ಯಮಿ ಲಕ್ಷ್ಮೀದೇವಿ ಗೋಪಿನಾಥ್, ಅಕ್ಷತಾ ಮುಕುಂದ್, ಜಗದೀಶ್ ಮಾತನವರ್, ವಿಶ್ವೇಶ್ವರಯ್ಯ, ವಸಂತ ಹೋಬಳಿದಾರ್, ರಮೇಶ್ ಹೆಗ್ಡೆ, ಪಟ್ಟಾಭಿರಾಂ, ಡಿ.ಜಿ.ಬೆನಕಪ್ಪ, ಜೋಯಿಸ್ ರಾಮಾಚಾರ್, ಜಿ.ವಿಜಯಕುಮಾರ್, ವಸಂತ ದಿವೇಕರ್, ಶಿವಮೊಗ್ಗ ನಗರದ ವಿವಿಧ ಕ್ಷೇತ್ರದ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
Leave a Reply