ಬೆಳ್ಳಿ ಬಂಗಾರದಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ: ಭದ್ರಾವತಿ ಯುವಕನ ಕೈಚಳಕ
ಶಿವಮೊಗ್ಗ : ಭದ್ರಾವತಿಯ ಯುವಕನ ಕೈಯಲ್ಲಿ ಬೆಳ್ಳಿ ಮತ್ತು ಬಂಗಾರದಲ್ಲಿ ಅಯೋಧ್ಯೆಯ ರಾಮಮಂದಿರ ಅರಳಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕಲೆಯಲ್ಲಿ ಭದ್ರಾವತಿಯ ಯುವಕನು ತನ್ನ ಕೈಚಳಕ ತೋರಿಸಿದ್ದಾನೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಯುವಕನ ಬೆಳ್ಳಿ ಮತ್ತು ಬಂಗಾರದಲ್ಲಿ ರಾಮಮಂದಿರ ಅರಳಿದೆ.
ಅಯೋಧ್ಯೆ ಯಲ್ಲಿ ಜ.22 ರಂದು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿತ್ತು. ಈ ಅದ್ಬುತ ಕ್ಷಣಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಒಬ್ಬೊಬ್ಬರು ತನ್ನದೇ ರೀತಿಯಲ್ಲಿ ಭಕ್ತಿ ಮೆರೆಯುತ್ತಿದ್ದಾರೆ. ಅದರಂತೆ ಜಿಲ್ಲೆಯ ಭದ್ರಾವತಿಯ ಯುವಕ, ವೃತ್ತಿಯಲ್ಲಿ ಅಕ್ಕಸಾಲಿಗ ಆಗಿರುವ ಸಚಿನ್ ವರ್ಣೇಕರ್ ತಮ್ಮ ಕೈಚಳಕ ತೋರಿದ್ದಾರೆ. ಸುಮಾರು 140 ಗ್ರಾಂ ತೂಕದ ಬೆಳ್ಳಿಯಿಂದ ರಾಮ ಮಂದಿರ ನಿರ್ಮಿಸಿದ್ದಾರೆ. ಇದಕ್ಕಾಗಿ ಒಂದು ತಿಂಗಳ ಕಾಲ ಶ್ರಮ ಹಾಕಿದ್ದು, ಬೆಳ್ಳಿಯಲ್ಲಿ ರಾಮ ಮಂದಿರ ಅದ್ಬುತವಾಗಿ ಮೂಡಿ ಬಂದಿದೆ. ಐದೂವರೆ ಇಂಚು ಎತ್ತರ, ನಾಲ್ಕು ಇಂಚು ಅಗಲ, ಆರು ಇಂಚು ಉದ್ದದಲ್ಲಿ ರಾಮ ಮಂದಿರ ನಿರ್ಮಿಸಿದ್ದಾರೆ.
ಅಲ್ಲದೇ ಈ ರಾಮ ಮಂದಿರಕ್ಕೆ ಲೈಟಿಂಗ್ ವ್ಯವಸ್ಥೆ ಸಹ ಮಾಡಿದ್ದಾರೆ. ಇದೀಗ 140 ಗ್ರಾಂ ಬೆಳ್ಳಿ ಬಳಸಿಕೊಂಡು ನಿರ್ಮಿಸಿರುವ ರಾಮ ಮಂದಿರ ನೋಡುಗರ ಗಮನ ಸೆಳೆಯುತ್ತಿದೆ. ಗೋಪುರ ಮತ್ತು ಧ್ವಜ ಪ್ರಮುಖ ಆಕರ್ಷಣೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಬೆಳ್ಳಿಯಲ್ಲಿ ಅಯೋಧ್ಯೆಯ ರಾಮಮಂದಿರ ಅರಳಿ ನಿಂತಿದೆ. ಸದ್ಯ ಈ ದೇಗುಲ ಎಲ್ಲರ ಗಮನ ಸೆಳೆಯುತ್ತಿದೆ.
500 ವರ್ಷಗಳ ಬಳಿಕ ಅದೇ ಭೂಮಿಯಲ್ಲಿ ಜ. 22 ರಂದು ಬಾಲರಾಮನ ಪ್ರತಿಷ್ಠಾನೆ ನಡೆಯಲಿದೆ. ಈ ಕ್ಷಣಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ರಾಮಜನ್ಮಭೂಮಿಯಲ್ಲೇ ದೇವಸ್ಥಾನಕ್ಕೆ ಸುಪ್ರೀಂಕೋರ್ಟ್ ಆದೇಶ ಮಾಡಿತ್ತು. ಆ ಸಂದರ್ಭದಲ್ಲಿ ಸಚಿನ್ 18 ಗ್ರಾಂ ಚಿನ್ನದಲ್ಲಿ ಪುಟ್ಟ ರಾಮ ಮಂದಿರ ಸಿದ್ದಪಡಿಸಿದ್ದನು. ಅಕ್ಕಸಾಲಿಗರ ಕುಟುಂಬಸ್ಥರಾಗಿರುವ ಸಚಿನಗೆ ಚಿಕ್ಕವಯಸ್ಸಿನಲ್ಲೆ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕಲೆಯಲ್ಲಿ ಕರಗತವಾಗಿದ್ದಾನೆ.
18 ಗ್ರಾಂ ಚಿನ್ನದಲ್ಲಿ ರಾಮ ಮಂದಿರ ಕಲಾಕೃತಿಯು ಎಲ್ಲರ ಮೆಚ್ಚುಗೆ ಗಮನ ಸೆಳೆದಿತ್ತು. ಈ ಅಯೋಧ್ಯೆಯ ರಾಮಮಂದಿರವು ಎರಡೂವರೆ ಇಂಚು ಉದ್ದ, ಒಂದು ಮುಕ್ಕಾಲೂ ಇಂಚು ಎತ್ತರದಿಂದ ಕೂಡಿತ್ತು. 45 ದಿನಗಳಲ್ಲಿ ಚಿನ್ನದ ಮಂದಿರ ಸಿದ್ಧಪಡಿಸಿದ್ದನು. ಚಿನ್ನದ ರಾಮಮಂದಿರಕ್ಕೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಬಂದಿತ್ತು.
ಈ ಹಿಂದೆ ಅತೀ ಸೂಕ್ಷ್ಮ ಕಲೆಯಲ್ಲಿ ಶಿವಲಿಂಗ, ಅಯ್ಯಪ್ಪ ಸ್ವಾಮಿ, ಕೇದರಾನಾಥ್ ದೇವಸ್ಥಾನ ಹಾಗೂ ಅಮರ್ ಜವಾನ್ ಸ್ಮಾರಕ. ವಿಶ್ವಕಪ್ ಬೆಳ್ಳಿಯಲ್ಲಿ ಲಾಲಚೌಕ್ ಕಲಾಕೃತಿ ಮೂಡಿ ಬಂದಿದ್ದವು. ಒಂದರ ಬಳಿಕ ಒಂದು ವಿಶೇಷ ಸಂದರ್ಭದಲ್ಲಿ ಸಚಿನ್ ಕೈಯಲ್ಲಿ ಹೊಸ ಹೊಸ ಕಲಾಕೃತಿಗಳು ಹೊರಹೊಮ್ಮುತ್ತಿರುವುದು ವಿಶೇಷವಾಗಿದೆ.
ಚಿನ್ನ ಮತ್ತು ಬೆಳ್ಳಿಯಲ್ಲಿ ರಾಮಮಂದಿರ ಕಲಾಕೃತಿಗಳು ಮಲೆನಾಡಿನ ಜನರ ಗಮನ ಸೆಳೆದಿವೆ. ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಅದೇ ಮಾದರಿಯ ಬೆಳ್ಳಿಯಲ್ಲಿ ರಾಮಮಂದಿರವು ಅರಳಿರುವುದು ವಿಶೇಷವಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply