ಜಮೀನು ಕಳೆದುಕೊಂಡವರಿಗೆ ಸಿಗದ ಪರಿಹಾರ ! ಪಿಡಬ್ಲ್ಯೂಡಿ ಕಛೇರಿ ಜಪ್ತಿಮಾಡಿದ ರೈತರು !
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಕಳೆದುಕೊಂಡವರಿಗೆ ಪರಿಹಾರ ಇನ್ನೂ ತಲುಪದೇ ಇರುವುದರಿಂದ ಕೋರ್ಟ್ ಆದೇಶದಂತೆ ಬಾಲರಾಜ್ ರಸ್ತೆಯಲ್ಲಿರುವ ಲೋಕಪಯೋಗಿ ಕಚೇರಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಚೇರಿಯಲ್ಲಿ ನೆನ್ನೆ ಜಪ್ತಿ ಮಾಡಲಾಯಿತು.
6 ಕಂಪ್ಯೂಟರ್, 1 ಸಿಪಿಯು, 1 ಪ್ರಿಂಟರ್, 1ಕೀ ಬೋರ್ಡ್ ಸೇರಿದಂತೆ ಸುಮಾರು 2.38 ಲಕ್ಷ ಮೌಲ್ಯದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು. ಸುಮಾರು 10 ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣಕ್ಕೆ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದ 10 ವರ್ಷದಿಂದ ಪರಿಹಾರಕ್ಕಾಗಿ ರೈತರು ಪರದಾಡುತ್ತಿದ್ದರು. ಇಂದು ಜೈಕುಮಾರ್, ವೆಂಕಟೇಶ್, ಲೋಕೇಶ್ ಎಂಬುವರು ಕೋರ್ಟಿನ ಆದೇಶದಂತೆ ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದರು.
ಹಲವು ರೈತರು ಜಮೀನು ಕಳೆದುಕೊಂಡಿದ್ದರು. ಸುಮಾರು 5.4 ಕೋಟಿ ರೂ. ಪರಿಹಾರ ಬರಬೇಕಾಗಿತ್ತು. ಹಲವು ಜಪ್ತಿ ವ್ಯಾರೆಂಟ್ ಬಂದಿದ್ದರೂ ಕೂಡ ಅಧಿ ಕಾರಿಗಳು ಅದನ್ನೂ ಮುಂದೂಡುತ್ತಿದ್ದರು. ಇಲ್ಲಿನ ಪಿಸಿಜೆ ನ್ಯಾಯಾಲಯ ಜಪ್ತಿ ವ್ಯಾರೆಂಟ್ನ್ನು ನೀಡಿತ್ತು. ಅದರ ಅನ್ವಯ ಈ ಜಪ್ತಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜೈಕುಮಾರ್ (ಜಯಣ್ಣ) ಲೋಕೇಶ್ ಅವರು ಪರಿಹಾರಕ್ಕಾಗಿ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಪ್ರತಿಯೊಬ್ಬರಿಗೆ 2 ಕೋಟಿ ರೂ. ಪರಿಹಾರ ಸಿಗಬೇಕು. 4 ಬಾರಿ ಜಪ್ತಿ ಆದೇಶವಾಗಿದೆ. ಆದರೂ ಕೂಡ ಅಧಿಕಾರಿಗಳು ಸಬೂಬು ಹೇಳಿ ವಾಪಾಸು ಕಳಿಸುತ್ತಿದ್ದರು. ಈ ಬಾರಿ ಸರ್ಕಾರದ ಗಮನ ಸೆಳೆಯಲು ಈ ಜಪ್ತಿಯನ್ನು ಮಾಡಿದ್ದೇವೆ. ಸುಮಾರು 5 ಕೋಟಿ ರೂ. ಬರಬೇಕು. ಆದರೆ, ಕೇವಲ 2 ಲಕ್ಷ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರದ ಗಮನಕ್ಕಾಗಿ ಈ ರೀತಿ ಜಪ್ತಿ ಮಾಡುವುದು ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿ ದಿವಾಕರ್ ಇದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply