ಸಾರ್ಥಕ ಐದು ದಶಕ ಪೂರೈಸಿದ ಪಿಯರ್‌ಲೈಟ್
ಶಿವಮೊಗ್ಗ: ಫೌಂಡ್ರಿ ಕ್ಷೇತ್ರದಲ್ಲಿ ಐದು ದಶಕಗಳ ಸಾರ್ಥಕ ಸೇವೆ ಸಲ್ಲಿಸಿರುವ ಪಿಯರ್‌ಲೈಟ್ ಲೈರ‍್ಸ್ ಸಂಸ್ಥೆಯು ದೇಶಕ್ಕೆ ಆರ್ಥಿಕ ಕೊಡುಗೆ ನೀಡುವಲ್ಲಿಯೂ ಮಹತ್ತರ ಪಾತ್ರ ವಹಿಸಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದ ಪಿಯರ್‌ಲೈಟ್ ಲೈನರ‍್ಸ್ ಸಂಸ್ಥೆ ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುವ ಜತೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದು ತಿಳಿಸಿದರು.
1974ರಲ್ಲಿ ಸಂಸ್ಥೆ ಆರಂಭಗೊಂಡು ಸಿಲಿಂಡರ್ ಲೈನರ‍್ಸ್ ಮತ್ತು ಇಂಜಿನ್ ಉತ್ಪನ್ನಗಳ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ನಾವೀನ್ಯತೆಯ ಮೂಲಕ ಖ್ಯಾತಿ ಹೊಂದಿದೆ. ವಿಶ್ವದ ಬಹುತೇಕ ರಾಷ್ಟ್ರ ಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿರುವುದು ವಿಶೇಷ ಎಂದರು.
ಇಟಲಿ, ಅಮೇರಿಕಾ, ಇಂಗ್ಲೆಂಡ್, ಯುಎಇ, ಜರ್ಮನಿ ಮತ್ತು ಹಲವಾರು ದೇಶಗಳಲ್ಲಿರುವ ಗೌರವಾನ್ವಿತ ಗ್ರಾಹಕರನ್ನು ಪಿಯರ್‌ಲೈಟ್ ತಲುಪುತ್ತಿದೆ. ಫೌಂಡ್ರಿ ಉತ್ಪನ್ನಗಳು ಮೂರು ದಶಕಗಳಿಂದಲೂ ವಿದೇಶಗಳಿಗೆ ರಫ್ತಾಗುತ್ತಿದೆ. ಪಿಯರ್‌ಲೈಟ್ ಲೈನರ‍್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೆಚ್ಚು ನುರಿತ ಹಾಗೂ ಅನುಭವಿ ವೃತ್ತಿಪರರ ತಂಡ ಹೊಂದಿರುವ ಮೂಲಕ ಗ್ರಾಹಕರ ಬೇಡಿಕೆಗಳನ್ನು ನೀರಿಕ್ಷೆಗೆ ತಕ್ಕಂತೆ ಪೂರೈಸುತ್ತಿದೆ ಎಂದು ತಿಳಿಸಿದರು.
ಪಿಯರ್‌ಲೈಟ್ ಲೈನರ‍್ಸ್ ಸಂಸ್ಥೆಯ ರಾಮಪ್ರಸಾದ್.ಎಚ್.ಜಿ., ಶಿವದಾಸ್ ಜಿ.ದಿವೇಕರ್, ಸವ್ಯಸಾಚಿ.ಎಚ್.ಆರ್., ಅಂಕಿತ್ ಎಸ್.ದಿವೇಕರ್, ಜೆ.ರಘುದತ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಮಾಜಿ ಅಧ್ಯಕ್ಷ ಡಿ.ಎಂ.ಶಂಕರಪ್ಪ, ನಿರ್ದೇಶಕ ಇ.ಪರಮೇಶ್ವರ್, ಪ್ರದೀಪ್ ಎಲಿ ಮತ್ತಿತರರು ಉಪಸ್ಥಿತರಿದ್ದರು.
Leave a Reply