ಮೆಗ್ಗಾನ್ ವೈದ್ಯರ ಯಡವಟ್ಟು ! ಆಕ್ಸಿಜನ್ ಸಿಗದೇ ರೋಗಿ ಸಾವು ! ಏನಿದು ಮೆಗ್ಗಾನ್ ಅವ್ಯವಸ್ಥೆ ?
ಶಿವಮೊಗ್ಗ : ಆಕ್ಸಿಜನ್ ಸಿಗದೆ ಉಸಿರಾಟ ತೊಂದರೆ ಇರುವ ರೋಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ
ಮೊನ್ನೆ ಬುಧವಾರ ಮಧ್ಯಾಹ್ನ ಭದ್ರಾವತಿ ತಾಲೂಕಿನ ಮಾರಶೆಟ್ಟಿಕೊಪ್ಪ ಗ್ರಾಮದ 37 ವರ್ಷದ ನಾಗರಾಜ್ ಉಸಿರಾಟ ತೊಂದರೆಯಿಂದ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ದಾಖಲು ಆಗಿದ್ದರು. ಇಂದು ಬೆಳಗ್ಗೆ ವಾರ್ಡ್ ನಿಂದ ಸ್ಕ್ಯಾನಿಂಗ್ ಮಾಡಲು ನಾಗರಾಜ್ ನನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿದೆ. ಆತನ ಉಸಿರಾಟಕ್ಕೆ ತೊಂದರೆಯಾಗಿದೆ. ಈ ನಡುವೆ ಆತನಿಗೆ ಆಕ್ಸಿಜನ್ ಅಗತ್ಯವಿತ್ತು. ಆದ್ರೆ ಆ ಸಮಯದಲ್ಲಿ ಆತನಿಗೆ ಆಕ್ಸಿಜನ್ ಪೂರೈಕೆಯಾಗಿಲ್ಲ.
ಈ ನಡುವೆ ಮತ್ತೆ ರೋಗಿಯನ್ನು ವಾರ್ಡ್ ಗೆ ಕರೆದುಕೊಂಡು ಹೋಗಿ ಆಕ್ಸಿಜನ್ ವ್ಯವಸ್ಥೆ ಮಾಡಿ ನಂತರ ಸ್ಕ್ಯಾನಿಂಗ್ ಕರೆದುಕೊಂಡು ಹೋಗಿದ್ದಾರೆ. ಆಗ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಆತ ಮೃತಪಟ್ಟಿದ್ದಾನೆ. ಮೊದಲೇ ಆತನಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗದೇ ವೈದ್ಯರು ಮತ್ತು ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ರೋಗಿ ಎನ್ನುವುದು ಗೊತ್ತಿದ್ದೂ, ಆಕ್ಸಿಜನ್ ಇಲ್ಲದೇ ವಾರ್ಡ್ ನಿಂದ ಸ್ಕ್ಯಾನಿಂಗ್ ಕರೆದುಕೊಂಡು ಹೋಗಿದ್ದೇ ಇಲ್ಲಿ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಆಕ್ಸಿಜನ್ ಇಲ್ಲದ ಹಿನ್ನೆಲೆಯಲ್ಲಿ ನಾಗರಾಜ್ ಗೆ ಮತ್ತೆ ಉಸಿರಾಟದ ತೊಂದರೆ ಉಲ್ಬಣಗೊಂಡಿದೆ. ಯಾವಾಗ ರೋಗಿಯು ಉಸಿರಾಟ ಸಮಸ್ಯೆಯಿಂದ ಒದ್ದಾಡಲು ಶುರು ಮಾಡಿದ, ಬಳಿಕ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದ ಸಿಬ್ಬಂದಿಗೆ ಎಚ್ಚರವಾಗಿದೆ.
ಇವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ರೋಗಿ ನಾಗರಾಜ್ ಮೃತಪಟ್ಟಿದ್ದಾನೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ. ಉಸಿರಾಟ ಸಮಸ್ಯೆಯೆಂದು ಆಸ್ಪತ್ರೆಗೆ ದಾಖಲು ಆಗಿ ಒಂದೇ ದಿನದಲ್ಲಿ 37 ವರ್ಷದ ವ್ಯಕ್ತಿಯು ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply