ಮೇ 7 ಕ್ಕೆ  ಮತದಾನ  : ಅಂತಿಮ ಹಂತದ ಸಿದ್ಧತೆ ಪೂರ್ಣ – ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಶಿವಮೊಗ್ಗ : ಲೋಕಸಭೆ ಚುನಾವಣೆಯ ದೇಶದ ಮೂರನೇ ಹಾಗೂ ರಾಜ್ಯದ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದ್ದು, ರಾಜ್ಯದ 14 ಕ್ಷೇತ್ರಗಳಿಗೆ ಎ.26ರಂದು ಮತದಾನ ಮುಗಿದಿದೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ‘ಗರಿಷ್ಠ 1,500 ಮತದಾರರನ್ನು ಒಳಗೊಂಡಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

ಮಹಿಳಾ ಮತದಾರರನ್ನು ಸೆಳೆಯಲು 40 ‘ಸಖಿ’ ಮತದಾನ ಕೇಂದ್ರಗಳು ಹಾಗೂ ಯುವ ಮತದಾರರಿಗಾಗಿ 8, ಅಂಗವಿಕಲರಿಗೆ 8, ಮಾದರಿ ಮತಗಟ್ಟೆಗಳು 8, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 2,039 ಮತಗಟ್ಟೆಗಳಲ್ಲೂ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರ‍್ಯಾಂಪ್, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚು ಇರುವುದರಿಂದ ಮತದಾರರಿಗೆ ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ತುರ್ತು ಉಪಚಾರಕ್ಕೆ ಒಆರ್‌ಎಸ್‌ ಸೇರಿ ಅಗತ್ಯ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಬರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವ್ಹೀಲ್‌ ಚೇರ್ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಮತದಾರರ ಸಹಾಯವಾಣಿಯ ಮೂಲಕ 1,715 ಕರೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ದೂರುಗಳ ದಾಖಲಿಸಿದ್ದಾರೆ. ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಸಿ-ವಿಜಿಲ್‌ ಅಪ್ಲಿಕೇಶನ್‌ ಮೂಲಕ 258 ದೂರುಗಳು ಬಂದಿದ್ದವು. ಅದರಲ್ಲಿ 235 ದೂರುಗಳ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. 23 ದೂರುಗಳನ್ನು ಕೈ ಬಿಡಲಾಗಿದೆ. ಸುವಿಧಾ ಅಡಿಯಲ್ಲಿ ಅನುಮತಿಗಳಿಗಾಗಿ 821 ಅರ್ಜಿಗಳ ಸ್ವೀಕರಿಸಲಾಗಿದೆ. ಅದರಲ್ಲಿ 645 ಅಂಗೀಕರಿಸಲಾಗಿದೆ. 120 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 1,021 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ನಡೆಸಲಾಗುತ್ತಿದೆ. ಶಿವಮೊಗ್ಗದ ಬಿಎಚ್‌ ರಸ್ತೆಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗಿದೆ. ಮತದಾನದ ನಂತರ ಎಲ್ಲ ಮತಯಂತ್ರಗಳನ್ನು ಮತ್ತು ಶಾಸನಾತ್ಮಕ ದಾಖಲೆಗಳನ್ನು 3 ಹಂತದ ಭದ್ರತೆಯಲ್ಲಿ ಸಂರಕ್ಷಿಸಿಡಲಾಗುವುದು ಎಂದು ತಿಳಿಸಿದರು.

ಅಗತ್ಯ ಸೇವೆ ಇಲಾಖೆಗಳ ಸಿಬ್ಬಂದಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 532 ಮತದಾರರ ಪೈಕಿ 321 ಮಂದಿ ಮತ ಹಾಕಿದ್ದಾರೆ. ಶೇ 60.33 ಮಂದಿ ಈವರೆಗೂ ಅಂಚೆ ಮತ ಚಲಾಯಿಸಿದ್ದಾರೆ ಎಂದರು.

ಮತಗಟ್ಟೆ ಸಿಬ್ಬಂದಿಯ ಸಂಚಾರಕ್ಕಾಗಿ 276 ಕೆಎಸ್‌ಆರ್‌ಟಿಸಿ ಬಸ್‌, 11 ಮಿನಿಬಸ್‌, 4 ಟಿಟಿ ಮತ್ತು 125 ಜೀಪುಗಳನ್ನು ಬಳಕೆ ಮಾಡಲಾಗುತ್ತಿದೆ. ಮತಗಟ್ಟೆ ಸಿಬ್ಬಂದಿಗೆ ಬಿಸಿಯೂಟ ತಯಾರಿಕರಿಂದ ಊಟ, ಉಪಹಾರ ಮತ್ತು ಮಜ್ಜಿಗೆ, ಟೀ ವ್ಯವಸ್ಥೆ ಮಾಡಲಾಗುವುದು ಎಂದರು.

ಚುನಾವಣೆ ಮತ್ತು ಮತದಾನ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರು, ಪೊಲೀಸ್ ಸಿಬ್ಬಂದಿಗಳಿಗೆ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ ಮೂಲಕ ಸ್ಥಳೀಯ ಮತಗಟ್ಟೆಗಳಲ್ಲಿಯೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇತರೆ ಕ್ಷೇತ್ರಗಳ ಮತದಾರರಾದ ನೌಕರರಿಗೆ ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಪೋಸ್ಟಲ್ ವೋಟಿಂಗ್ ಸೆಂಟರ್ (PVC) ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.