ಶಿವಮೊಗ್ಗ : ಇಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಲೋಕಸಭಾ ಚುನಾವಣಾ ಕಣ ರಂಗೇರಿದೆ, ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ಹಳೆಯ ವಿಡಿಯೋ ಒಂದು ಹರಿದಾಡುತ್ತಿತ್ತು, ಈ ಬಗ್ಗೆ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ. ಜೊತೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೂ ದೂರು ನೀಡಿದ್ದಾರೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರ ಪರ ಮತಯಾಚಿಸುವ ಹಳೆಯ ವಿಡಿಯೋ ಒಂದು ಮತದಾನದ ದಿನದೊಂದೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ಹಲವು ಕಡೆಗಳಲ್ಲಿ ವೈರಲ್ ಆಗಿತ್ತು, ಈ ಸಂಬಂಧ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಈಶ್ವರಪ್ಪ ಇದೊಂದು ವ್ಯವಸ್ಥಿತ ಷಡ್ಯಂತ್ರ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಎಂದು ರಾಘವೇಂದ್ರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು
ವಿಡಿಯೋ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರಿಗೆ ದೂರು ನೀಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿರುವ ಅವರು ವಾಟ್ಸ್ಯಾಪ್ ಮೂಲಕ ಫೇಕ್ ವಿಡಿಯೋ ಹರಿಬಿಟ್ಟು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ಸೋಲುವ ಭಯದಿಂದ ಈ ರೀತಿ ಕೃತ್ಯವೆಸಗಲಾಗುತ್ತಿದ್ದು, ಇದರ ವಿರುದ್ದ ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೂರಿನಲ್ಲಿ ಏನಿದೆ ?
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಯನ್ನು ಹಬ್ಬಿಸಿ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹಾಗು ನಾನು ಬಿ.ಜೆ.ಪಿಯ ಅಭ್ಯರ್ಥಿಯಾದ ಬಿ.ವೈ ರಾಘವೇಂದ್ರ ಅವರನ್ನು ಬೆಂಬಲಿಸುತ್ತಿರುವುದಾಗಿ ಅಪಪ್ರಚಾರದ ಸುದ್ದಿಗಳನ್ನು, ವಿಡಿಯೋಗಳನ್ನು ಹರಿಬಿಡಲಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಾಪ್ ಮೂಲಕ ಹರಿಬಿಟ್ಟು ಮತದಾರರಲ್ಲಿ ಗೊಂದಲವನ್ನು ಸೃಷ್ಠಿ ಮಾಡಲಾಗುತ್ತಿದೆ. ಈ ರೀತಿಯ ಕೆಲಸವು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು ಈ ವಿಷಯವಾಗಿ ನಾನು ಅಧಿಕೃತವಾಗಿ ತಮ್ಮಲ್ಲಿ ದೂರು ದಾಖಲಿಸುತ್ತಿದ್ದೇನೆ. ತಾವು ಈ ದೂರನ್ನು ಗಂಭೀರವಾಗಿ ಪರಗಣಿಸಬೇಕು ಎಂದು ಈಶ್ವರಪ್ಪನವರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply