ಶಿವಮೊಗ್ಗ : ನಗರದ ಹಳೆ ಶಿವಮೊಗ್ಗದ ಭಾಗದ ಲಷ್ಕರ್ ಮೊಹಲ್ಲದ ಸರ್ಕಲ್ ನಲ್ಲಿಯೇ ಅಟ್ಟಾಡಿಸಿ ಹಾಡಹಗಲೇ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾದ ಭಯಾನಕ ಘಟನೆ ಇಂದು ಸಂಜೆ 5 : 30ರ ಸುಮಾರಿಗೆ ನಡೆದಿದ್ದು, ಹಾಡ ಹಗಲೇ ಶಿವಮೊಗ್ಗದಲ್ಲಿ ಮಾರಕಸ್ತ್ರಗಳ ಸದ್ದು ಭಯ ಹುಟ್ಟಿಸುವಂತಿದೆ.
ಕಳೆದೊಂದು ವಾರದ ಹಿಂದೆ ರೌಡಿಶೀಟರ್ ಯಾಸಿನ್ ಮತ್ತೊಬ್ಬ ರೌಡಿಶೀಟರ್ ಜೊತೆ ಜಗಳ ನಡೆದು ಇಬ್ಬರ ನಡುವೆ ಗ್ಯಾಂಗ್ ವಾರ್ ನಡೆಯುತ್ತಿತ್ತು ಎನ್ನಲಾಗಿದೆ. ಸಂಜೆ 5 : 30ರ ಸುಮಾರಿಗೆ ಲಷ್ಕರ್ ಮೊಹಲ್ಲಕ್ಕೆ ಬಂದ ಗ್ಯಾಂಗ್ ಒಂದು ರೌಡಿಶೀಟರ್ ಯಾಸಿನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಯಾಸಿನ್ ಕುರೇಶಿ ಗ್ಯಾಂಗ್ ಅಟ್ಯಾಕ್ ಮಾಡಲು ಬಂದವರ ಮೇಲೆ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಎದುರಾಳಿ ಗ್ಯಾಂಗ್ ನ ಕೆಆರ್ ಪುರಂ ನ ನಿವಾಸಿ ಶೋಯೆಬ್ಅಲಿಯಾಸ್ ಖಲಂದರ್ ಅಲಿಯಾಸ್ ಸೇಬು (32) ಮತ್ತು ಅಣ್ಣನಗರ ನಿವಾಸಿ ಮೊಹಮ್ಮದ್ ಗೌಸ್(30) ಎಂಬಾತನನ್ನ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಇದಕ್ಕೂ ಮೊದಲು ಅಟ್ಯಾಕ್ ನಲ್ಲಿ ಗಾಯಗೊಂಡಿದ್ದ ಯಾಸಿನ್ ದುಷ್ಕರ್ಮಿಗಳ ತಂಡದಿಂದ ತಪ್ಪಿಸಿಕೊಂಡು ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು , ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ರೌಡಿಗಳ ನಡುವೆ ನಡೆದ ಗಲಾಟೆಯ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎನ್ನಲಾಗಿದೆ
ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು ?
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿಕೆ ಮಿಥುನ್ ಕುಮಾರ್ ಪೊಲೀಸರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ ಪಿ ಮಿಥುನ್ ಕುಮಾರ್ ಸಂಜೆ 5:30ರ ಸುಮಾರಿಗೆ ಹೊರಗಡೆಯಿಂದ ಬಂದ ಕೆಲ ಹುಡುಗರು ಒಬ್ಬನ ಮೇಲೆ ದಾಳಿ ನಡೆಸಿದ್ದಾರೆ. ನಂತರ ಆತನ ಸ್ನೇಹಿತರು ಅವರ ಮೇಲೆ ಪ್ರತಿ ದಾಳಿ ನಡೆಸಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ, ಕೊಲೆಯಾದ ಇಬ್ಬರ ಗುರುತು ಪತ್ತೆಯಾಗಿದೆ, ಇನ್ನೂ ಹಲ್ಲೆಯಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಕೊಲೆ ಮಾಡಿದವರ ಕೆಲ ಸಿಸಿಟಿವಿ ದೃಶ್ಯಗಳು ದೊರೆತಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಕೊಡುವುದಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply