ಶಿವಮೊಗ್ಗ : ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ….. ಜೋಗ ಜಲಪಾತವನ್ನು ನೋಡುವಾಗಲೆಲ್ಲ ಕನ್ನಡದ ಖ್ಯಾತ ಕವಿ ನಿಸಾರ್ ಅಹ್ಮದ್ ಅವರ ನಿತ್ಯೋತ್ಸವ ಕವನದ ಸಾಲುಗಳು ಕನ್ನಡಿಗರಿಗೆ ನೆನಪಾಗುತ್ತವೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ರುದ್ರ ರಮಣೀಯವಾಗಿ ಹರಿಯುತ್ತಿದ್ದು ಜೋಗದ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಹಾಲ್ನೊರೆಯಂತೆ ಮೇಲಿಂದ ಕೆಳಭಾಗಕ್ಕೆ ಧುಮ್ಮಿಕ್ಕುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುವುದರ ಜೊತೆಗೆ ನಿಸರ್ಗದ ಅದ್ಭುತಗಳ ಬಗ್ಗೆ ಕೌತುಕಮ ಕುತೂಹಲ ಸೃಸ್ಟಿಸುತ್ತದೆ.
ಧೀರ ನಡಿಗೆಯ ರಾಜ, ಬಳಕುತ್ತಾ ಧುಮ್ಮಿಕ್ಕುವ ರಾಣಿ, ಹುಲಿಯಂತೆ ಆರ್ಭಟಿಸುತ್ತಾ ಪಾತಾಳ ಸೇರುವ ರೋರರ್, ಬಾಣದಂತೆ ಚಿಮ್ಮಿ, ನೊರೆ ಹಾಲುಕ್ಕಿಸುವಂತಿರುವ ರಾಕೆಟ್ ಜಲಧಾರೆಗಳ ಸೌಂದರ್ಯ, ಶಬ್ದಗಳಲ್ಲಿ ಹಿಡಿದಿಡಲಾಗದು. ಇಲ್ಲಿನ ಜಲಧಾರೆಗಳಲ್ಲಿ ರಾಣಿಗೆ ಗೌರವನೀತ ತಡಸಲು ಎಂದು ಇನ್ನೊಂದು ಹೆಸರಿದೆ, ಅಂತೆಯೇ ರೋರರ್ಗೆ ಅಬ್ಬರ ತಡಸಲು ಎಂದು, ರಾಕೆಟ್ಗೆ ಬಾಣ ತಡಸಲು ಎಂದು ಕರೆಯಲಾಗುತ್ತಿದ್ದು, ಮೈಸೂರು ಅರಸರ ರಾಜ್ಯಾಡಳಿತದ ಅವಧಿಯಲ್ಲಿ ಬಾಣ ತಡಸಲಿನ ತಳದಿಂದ ಪಟಾಕಿ, ಬಾಣಬಿರುಸುಗಳನ್ನು ಚಿಮ್ಮಿಸಲಾಗುತ್ತಿರುವುದಾಗಿ ಹೇಳಲಾಗುತ್ತದೆ.

ಸುಮಾರು 250 ಅಡಿ ಚದುರದ ಹಾಸುಗಲ್ಲಿನ ಮೇಲಿಂದ ಹರಿದುಬರುತ್ತಾ ನೇರವಾಗಿ 960 ಅಡಿ ಆಳದ ಕಮರಿಗೆ ತಮ್ಮದೇ ಹೊಸಹೊಸ ಬಗೆಯ ವಿವಿಧ ವಿನ್ಯಾಸದೊಂದಿಗೆ ಧುಮುಕುವ ಈ ನಾಲ್ಕು ಜಲಧಾರೆಗಳ ನೋಟದ ರುಧ್ರರಮಣೀಯತೆಯು ಮಾತಿಗೆ ನಿಲಕದು.
ವರದಿ : ಲಿಂಗರಾಜ್ ಗಾಡಿಕೊಪ್ಪ




Leave a Reply