ಏಸೂರು ಕೊಟ್ಟರೂ ಈಸೂರು ಕೊಡೆವುಆಂಗ್ಲರ ವಿರುದ್ಧ ರಣಕಹಳೆ ಮೊಳಗಿಸಿದ ಕನ್ನಡಿಗರ ಕಥನ

ಇದು ವಸಾಹತುಶಾಹಿಯ ಬ್ರಿಟಿಷ್ ಸಾಮ್ರಾಜ್ಯದ ಎದುರು ತೊಡೆ ತಟ್ಟಿ ದೇಶದಲ್ಲೇ ಮೊದಲ ಸ್ವತಂತ್ರ ಗ್ರಾಮ ಎಂದು ಹೆಗ್ಗಳಿಕೆ ಪಡೆದ ಶಿವಮೊಗ್ಗದ ಪುಟ್ಟ ಹಳ್ಳಿಯ ಕನ್ನಡಿಗರ ರೋಚಕ ಕಥನ.

ಭಾರತ ದೇಶದಲ್ಲಿ ಬ್ರಿಟಿಷರ ದುರಾಡಳಿತವನ್ನು ಕಿತ್ತೊಗೆದು ಸ್ವಾತಂತ್ರ್ಯ ಪಡೆಯಲು, ಜನಸಾಮಾನ್ಯರುಗಳು ಮಾಡಿರುವ ಹೋರಾಟ, ದೇಶಪ್ರೇಮ, ತ್ಯಾಗ-ಬಲಿದಾನಗಳು ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಜನಸಾಮಾನ್ಯರುಗಳು ಮಾಡಿದ ಕೆಚ್ಚಿನ ಹೋರಾಟ, ಬಲಿದಾನ, ತ್ಯಾಗಕ್ಕೆ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ ಒಂದು ಅವಿಸ್ಮರಣೀಯ ಸಾಹಸಗಾಥೆಯಾಗಿದೆ. ಮುಗ್ಧ ರೈತಾಪಿ ಜನರು, ಯಾರ ಬಲಿಷ್ಠ ನಾಯಕತ್ವದ ಮಾರ್ಗದರ್ಶನವೂ ಇಲ್ಲದೆ 1942 ರ ಕ್ವಿಟ್‌ ಇಂಡಿಯಾ ಚಳುವಳಿಯ ಕಾಲದಲ್ಲಿಯೇ ಈಸೂರು ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿ, ಬ್ರಿಟಿಷರ ವಿರುದ್ಧ ಎದೆತಟ್ಟಿ ಹುತಾತ್ಮರಾದ, ರೋಮಾಂಚನಕಾರಿ, ಕರುಣಾಜನಕ ಕಥೆ ದೇಶದ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು.

ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್‌ ತಿಂಗಳಲ್ಲಿ ತಕ್ಷಣ ನೆನಪಾಗುವ ಹೆಸರು ಈಸೂರು ಗ್ರಾಮ. ಭಾರತದ ಭೂಪಟದಲ್ಲಿ ಒಂದು ವಿಶೇಷ ಸ್ಥಾನ ಪಡೆದಿರುವ ಈ ಪುಟ್ಟ ಗ್ರಾಮ ವೀರತನಕ್ಕೆ, ಮಹಾಕ್ರಾಂತಿಗೆ ಹೆಸರಾಗಿರುವ ವೀರಭೂಮಿ. ದೇಶದಲ್ಲೇ ಸ್ವತಂತ್ರಗೊಂಡ ಮೊದಲ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈಸೂರು ಗ್ರಾಮ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮುದಿನಿ ನದಿಯ ದಂಡೆಯ ಮೇಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಕಪಿಮುಷ್ಟಿಯಿಂದ ಭಾರತಾಂಬೆಯ ದಾಸ್ಯವನ್ನು ಬಿಡುಗಡೆಗೊಳಿಸಬೇಕೆಂಬ ಹೋರಾಟ ಅವಿರತವಾಗಿ ನಡೆದಿತ್ತು. ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಭಾರತಕ್ಕೆ ಲಗ್ಗೆ ಇಟ್ಟಂತಹ ಬ್ರಿಟಿಷರು, ಇಲ್ಲಿನ ರಾಜ ಮಹಾರಾಜರುಗಳ ವೈಮನಸ್ಸು ಒಳ ಜಗಳಗಳ ಲಾಭವನ್ನು ಪಡೆದು, ಹಂತ ಹಂತವಾಗಿ ಇಡೀ ಭಾರತವನ್ನು ತಮ್ಮ ಸ್ವಾಮ್ಯಕ್ಕೆ ಪಡೆದರು. ಹಾಗೂ ಹಲವು ದೂರ್ತ ಕಾಯ್ದೆಗಳಿಂದ ಒಂದೊಂದೇ ಸಂಸ್ಥಾನಗಳನ್ನ ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ತಮ್ಮ ಸಂಸ್ಥಾನದ ಉಳಿವಿಗಾಗಿ ರಾಜ ರಾಣಿಯರು ಬ್ರಿಟಿಷರ ಕುತಂತ್ರದ ವಿರುದ್ಧ ಹೋರಾಟಕ್ಕಿಳಿದರು. ಬೇರೆ ರಾಜರುಗಳ ಸಹಾಯ ಸಿಗದೇ ಸೋತು ಹೋಗಿದ್ದರು. ತದನಂತರ ಜನಸಾಮಾನ್ಯರು, ಬುದ್ಧಿವಂತರುಗಳು, ವಿಚಾರವಂತರು ಅಹಿಂಸವಾದಿಗಳು ಬ್ರಿಟಿಷರನ್ನು ಭಾರತದಿಂದ ತೊಲುಗಿಸುವ ಸಲುವಾಗಿ ಚಳುವಳಿ, ಪ್ರತಿಭಟನೆ,ಜೈಕಾರ, ಸಭೆಗಳು ಮುಂತಾದ ಕಾರ್ಯಕ್ರಮಗಳ ಮೂಲಕ ಜನತೆಯನ್ನು ಒಗ್ಗೂಡಿಸಿ ಸ್ವಾತಂತ್ರ್ಯಕ್ಕಾಗಿ ಶ್ರಮಿಸತೊಡಗಿದರು. ಬ್ರಿಟಿಷರ ವಿರುದ್ಧ ಸೆಟೆದು ನಿಂತರು.

 ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವ ನಿಟ್ಟಿನಲ್ಲಿ 1942 ಆಗಸ್ಟ್ 8 ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ ಕರೆ ನೀಡಿದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳುವಳಿಗೆ ದೇಶದಾದ್ಯಂತ ವ್ಯಾಪಕವಾದ ಸ್ಪಂದನೆ ದೊರಕಿತು. ಈ ಚಳುವಳಿ ಎಲ್ಲೆಡೆ ಹರಡುತ್ತಾ, ಹಬ್ಬುತ್ತಾ ನಮ್ಮ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರು ಗ್ರಾಮವನ್ನೂ ತಲುಪಿತು. ಮೊದಲೇ ದೇಶಪ್ರೇಮ, ಸ್ವಾಭಿಮಾನವನ್ನು ಬೆಳೆಸಿಕೊಂಡ ಈಸೂರು ಗ್ರಾಮಸ್ಥರು ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಎಂಬ ಮಾತಿಗೆ ಕಟಿಬದ್ಧರಾದರು.

ಗಾಂಧೀಜಿಯವರು ನೀಡಿದ ಕರೆಯ ವಿಷಯ ತಿಳಿಯುತ್ತಲೇ ಊರಿನ ಹಿರಿಯರು ವೀರಭದ್ರೇಶ್ವರ ಸ್ವಾಮಿಯ ಗುಡಿಯ ಸಮ್ಮುಖದಲ್ಲಿ ಸಭೆಯನ್ನು ನಡೆಸಲು ತೀರ್ಮಾನಿಸಿದರು. ಸಭೆಯಲ್ಲಿ ಎಲ್ಲಾ ಜನಾಂಗದ ಯುವಕರು,ಮಹಿಳೆಯರು,ಮಕ್ಕಳು ಒಟ್ಟಾಗಿ ಸಭೆ ಸೇರಿ ಮಹಾತ್ಮ ಗಾಂಧೀಜಿಯವರ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ವಿಷಯದ ಮೇಲೆ ಚರ್ಚೆ ನಡೆದು ಒಂದು ತೀರ್ಮಾನಕ್ಕೆ ಬರುತ್ತಾರೆ. ಬ್ರಿಟಿಷ್ ಸರಕಾರಕ್ಕೆ ಇನ್ನು ಮುಂದೆ ಕಂದಾಯವನ್ನಾಗಲಿ ಅಥವಾ ಯಾವುದೇ ಸಹಕಾರವನ್ನು ನೀಡಕೂಡದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇನ್ನು ಮುಂದೆ ನಮ್ಮ ಗ್ರಾಮದ ಆಡಳಿತವನ್ನು ನಾವೇ ನಡೆಸೋಣ ಎಂದು 

“ಈಸೂರು ಸ್ವತಂತ್ರ ಹಳ್ಳಿ, ಬ್ರಿಟಿಷರು ಒಳಬರುವಂತಿಲ್ಲ” ಎಂದು ಬರೆದ ಸಣ್ಣ ಹಲಗೆಯನ್ನು ಊರ ಹೆಬ್ಬಾಲಿಗೆ ನೇತು ಹಾಕುತ್ತಾರೆ. “ಏಸೂರು ಕೊಟ್ಟರೂ ಈಸೂರು ಕೊಡೆವು” ಕೂಗು ಕೂಗುತ್ತಾ ಎದೆಗಾರಿಕೆ ತೋರುತ್ತಾರೆ. ಅಲ್ಲದೇ ಊರಿನ ವೀರಭದ್ರ ಗುಡಿಯಲ್ಲಿ ಬಾವುಟವನ್ನು ಹಾರಿಸುವ ಮೂಲಕ, ತಾವು ಸ್ವತಂತ್ರರು ಎನ್ನುವ ಸಂದೇಶವನ್ನು ಸಾರುತ್ತಾರೆ.

 ಈಸೂರು ಗ್ರಾಮದ ಗ್ರಾಮಸ್ಥರ ಎದೆಗಾರಿಕೆ ಎಸ್ಟಿತ್ತು ಎಂದರೆ, ಗ್ರಾಮತ ಆಡಳಿತವನ್ನು ನಡೆಸಲು ಕಿರಿಯರಿಗೆ ಅಧಿಕಾರವನ್ನು ಕೊಡೋಣ, ನಾವು ಅವರಿಗೆ ಮಾರ್ಗದರ್ಶಕರಾಗಿ ಸಲಹೆ ನೀಡೋಣ. ಇಂದಿನ ಮಕ್ಕಳು ಮುಂದಿನ ಹಿರಿಯರಾಗಿ ಗ್ರಾಮವನ್ನು ಅಭಿವೃದ್ಧಿಪಡಿಸುತ್ತಾರೆ ಎಂದು ಗ್ರಾಮಸ್ಥರು ಚರ್ಚೆ ನಡೆಸಿ. ಕೊನೆಗೆ ಸರ್ವಾನುಮತದಿಂದ 10 ವರ್ಷದ ಜಯಣ್ಣನನ್ನು ಅಮಲ್ದಾರರನ್ನಾಗಿಯೂ, 12 ವರ್ಷದ ಮಲ್ಲಪ್ಪನನ್ನು ಪೊಲೀಸ್ ಅಧಿಕಾರಿಯನ್ನಾಗಿಯೂ ಆಯ್ಕೆಮಾಡಿ ತಮ್ಮದೇ ಸರ್ಕಾರವನ್ನ ಘೋಷಣೆ ಮಾಡಿದರು. ಹೊಸದಾಗಿ ಆಯ್ಕೆಯಾದ ಗ್ರಾಮದ ಅಮಲ್ದಾರರಾದ ಜಯಣ್ಣ ಮತ್ತು ಪೊಲೀಸ್ ಅಧಿಕಾರಿಯಾದ ಮಲ್ಲಪ್ಪನವರ ನೇತೃತ್ವದಲ್ಲಿ ಪ್ರತಿನಿತ್ಯ ವೀರಭದ್ರ ಸ್ವಾಮಿಯ ಗುಡಿಯ ಮುಂದೆ ಸಭೆ ನಡೆಸಲಾಗುತ್ತಿತ್ತು. ಇದನ್ನು ಕಂಡ ಬ್ರಿಟಿಷ್ ಸರ್ಕಾರ ಸ್ವತಂತ್ರ ಸರ್ಕಾರ ರಚಿಸಿಕೊಂಡ ಗ್ರಾಮಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಕಳಿಸುತ್ತದೆ. ಗ್ರಾಮಕ್ಕೆ ಬಂದ ಅಧಿಕಾರಿಗಳಿಗೆ ಖಾದಿ ಟೋಪಿ ಧರಿಸುವಂತೆ ಗ್ರಾಮಸ್ಥರು ಆಜ್ಞೆ ಮಾಡುತ್ತಾರೆ. ಇದರಿಂದ ಕೋಪಗೊಂಡ ಪೊಲೀಸರು ಗ್ರಾಮಸ್ಥರ ಮೇಲೆ ಮೇಲೆ ಹಲ್ಲೆ ನಡೆಸುತ್ತಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸಬ್‌ ಇನ್‌ಸ್ಪೆಕ್ಟರ್ ಕೆಂಚನಗೌಡ, ಅಮಲ್ದಾರ್‌ ಚನ್ನಕೃಷ್ಣಪ್ಪ ಅವರನ್ನು ಕೊಲೆ ಮಾಡುತ್ತಾರೆ. ನಂತರ ಬ್ರಿಟಿಷ್‌ ಅಧಿಕಾರಿಗಳು ಈಸೂರಿನ ಮೇಲೆ ದಾಳಿ ನಡೆಸಿ ಲೂಟಿ ಮಾಡಿ, ಮಹಿಳೆಯರು, ಮಕ್ಕಳೆನ್ನದೇ ಎಲ್ಲರ ಮೇಲೆ ಹಲ್ಲೆ ನಡೆಸುತ್ತಾರೆ. ಹೋರಾಟಕ್ಕೆ ಬೆಂಬಲ ನೀಡಿದ ಕಾರಣಕ್ಕೆ ಸಾಹುಕಾರ್‌ ಬಸವಣ್ಯಪ್ಪ ಅವರ ಮನೆಯನ್ನು ಸುಟ್ಟು ಹಾಕುತ್ತಾರೆ.ಬ್ರಿಟಿಷರು ಈ ಗ್ರಾಮದ ವಿರುದ್ಧ ಪೊಲೀಸ್ ದರ್ಪವನ್ನು ಮೆರೆಯುತ್ತಾರೆ . ಮನೆ ಮನೆಯ ಗಂಡಸರನ್ನು ಬಂಧಿಸಿದರು. ಇದರಿಂದ ಗ್ರಾಮದ ಯುವಕರು ತಿಂಗಳುಗಟ್ಟಲೆ ಮನೆ ಬಿಟ್ಟು ಕಾಡಿನಲ್ಲಿ ವಾಸವಿರುತ್ತಾರೆ. ಗ್ರಾಮದ ಹಲವು ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಿ ಅಧಿಕಾರಿಗಳು ಶಿಕ್ಷೆಗೊಳಪಡಿಸುತ್ತಾರೆ. 1943ರ ಮಾರ್ಚ್‌ 8ರಂದು ಗ್ರಾಮದ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಮಾರ್ಚ್‌ 9ರಂದು ಸೂರ್ಯನಾರಾಯಣಾಚಾರ್‌, ಬಡಕಳ್ಳಿ ಹಾಲಪ್ಪ ಹಾಗೂ ಮಾರ್ಚ್‌ 10ರಂದು ಗೌಡ್ರು ಶಂಕರಪ್ಪ ಅವರನ್ನು ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ಗಲ್ಲಿಗೇರಿಸುತ್ತಾರೆ. ಇಡೀ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿತ್ತು. ಈಸೂರು ಗ್ರಾಮ ಭಾರತದ ಇತಿಹಾಸದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಪಾತ್ರವನ್ನು ವಹಿಸಿತ್ತು. ಇಡೀ ದೇಶವೇ ಈ ಗ್ರಾಮದ ಹೋರಾಟ ಎದೆಗಾರಿಗೆ, ಸ್ವರಾಜ್ಯದ ಚಿಂತನೆಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಒಟ್ಟಿನಲ್ಲಿ ಅಂದು ತನ್ನ ನೆತ್ತರಿನ ಓಕುಳಿ ಚೆಲ್ಲಿ, ಒಂದು ಪುಟ್ಟ ಗ್ರಾಮ ಬ್ರಿಟಿಷರ ಸೊಲ್ಲಡಗಿಸುವ ಮೂಲಕ ಸ್ವತಂತ್ರ ಭಾರತದ ಇತಿಹಾಸದ ಪುಟಗಳಲ್ಲಿ ತನ್ನ ದಿಟ್ಟತನ ಮತ್ತು ತ್ಯಾಗದ ಹಚ್ಚೆಯನ್ನು ಅಚ್ಚಳಿಯದಂತೆ ಮೂಡಿಸಿದೆ. ಸ್ವತಂತ್ರ ಹೋರಾಟ ಎಂದಾಗ, ಮಾತು ಮಾತಿಗೂ ಹೊರಗಿನ ಶೂರರೆಡೆ ಕಣ್ಣು ಹಾಯಿಸುವ ಮುನ್ನ, ನಮ್ಮ ನೆಲದ ದಳವಾಯಿಗಳನ್ನು, ಮಂದಿಯನ್ನು ನೆನೆಯೋಣ. ಕನ್ನಡ ತಾಯಿ ಬಂಜೆಯಲ್ಲ, ಇಂತಹ ಹಲವಾರು ಹುಟ್ಟು ಹೋರಾಟಗಾರ/ಗಾರಿಯರಿಗೆ ಉಸಿರು ಬಸಿದವಳಾಗಿದ್ದಾಳೆ. ಇಂತಹ ಊರೊಂದು ಕರುನಾಡಲ್ಲಿ ಇರುವುದೆಂದರೆ, ಅವೆಲ್ಲವೂ ನಮಗೆ ಹೆಮ್ಮೆಯ ವಿಷಯ.

ಲಿಂಗರಾಜು ಗಾಡಿಕೊಪ್ಪ 


Leave a Reply

Your email address will not be published.