ರಿಪ್ಪನಪೇಟೆ : ಪಟ್ಟಣದ ಕೆನೆರಾ ಬ್ಯಾಂಕ್ ಮ್ಯಾನೇಜರ್ ಒಬ್ಬರು ಸರ್ಕಾರದಿಂದ ಬಂದಿರುವ ವೃದ್ದಾಪ್ಯ ವೇತನವನ್ನು ವೃದ್ಧೆಯೊಬ್ಬರಿಗೆ ನೀಡದೆ ಕಳೆದ ಆರೇಳು ತಿಂಗಳಿನಿಂದ ಲೋನ್ ನೆಪ ಹೇಳಿ ತಡೆ ಒಡ್ಡಿರುವ ಘಟನೆ ನಡೆದಿದೆ.
ಬಡತನ ರೇಖೆಗಿಂತ ಕೆಳಗಿರುವ ನಾಡಿನ ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಸಂತೋಷದಿಂದ ಇರಲಿ ಎಂಬ ಸದುದ್ದೇಶದಿಂದ ಸರ್ಕಾರ ಮಾಸಾಶನ ನಿಗದಿ ಮಾಡಿ ಅವರ ಜೀವನಕ್ಕೆ ಆಧಾರವಾಗಿದೆ.ಆದರೆ ದೇವರು ಕೊಟ್ಟರು ಪೂಜಾರಿ ಪೂಜಾರಿ ಕೊಡುವುದಿಲ್ಲ ಎನ್ನುವ ಹಾಗೇ ಕೆನರಾ ಬ್ಯಾಂಕ್ ನ ಮ್ಯಾನೇಜರ್ ವೃದ್ದೆಗೆ ಮಾಸಾಶನ ನೀಡಲು ಕಳೆದ ಆರೇಳು ತಿಂಗಳಿನಿಂದ ಅಲೆದಾಡಿಸುತಿದ್ದಾರೆಂಬ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಕೆರೆಹಳ್ಳಿ ಹೋಬಳಿಯ ಕಳಸೆ ಗ್ರಾಮದ ದೇವಮ್ಮ ಎಂಬ 80 ರ ವೃದ್ದೆಯ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಾಗಿದೆ. ಈ ಹಣ ಬಂದ್ರೆ ತುತ್ತಿನ ಚೀಲ ತುಂಬಿಕೊಳ್ಳುವ ಆ ಹಿರಿಯ ಜೀವ ಇವತ್ತು ದಿನನಿತ್ಯದ ಅವಶ್ಯಕತೆಗಳಿಗೆ ಹಣವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಬಡತನದ ರೇಖೆಗಳಿಗಿಂತ ಕೆಳಗೆ ಜೀವನ ಸಾಗಿಸುತ್ತಿರುವ ಬಡ ಹಿರಿಯ ಜೀವಗಳು ಮಕ್ಕಳ ಆಸರೆ ಇಲ್ಲದಿದ್ರೂ ಉಪವಾಸ ನರಳಬಾರದು ಎಂಬ ಸದುದ್ದೇಶದಿಂದ ಸರ್ಕಾರ ವೃದ್ಧಾಪ್ಯ ವೇತ ನೀಡುತ್ತಿದೆ. ಆದ್ರೆ, ಸರ್ಕಾರ ವೇತನ ನೀಡ್ತಾಯಿದ್ರೂ ಈ ಹಿರಿಯ ಜೀವಕ್ಕೆ ವೃದ್ದಾಪ್ಯ ವೇತನ ನೀಡುವಲ್ಲಿ ಬ್ಯಾಂಕ್ ಮ್ಯಾನೇಜರ್ ಅಲೆದಾಡಿಸುತ್ತಿರುವುದು ನೋಡಿದರೆ ಬೇಸರವೆನಿಸುತ್ತದೆ.
ಹಿರಿಯ ಜೀವ ದೇವಮ್ಮ ಹತ್ತಾರು ಕಿಲೋ ಮೀಟರ್ ನಿಂದ ಬಂದು ಹಣಕ್ಕಾಗಿ ನೀರು, ಚಹಾ, ಉಪಹಾರವಿಲ್ಲದೇ ಕ್ಯೂ ನಿಂತರೆ ನಿನ್ನ ಮಗನ ಬಳಿ ಲೋನ್ ಕಟ್ಟಲು ಹೇಳು ಇಲ್ಲದಿದ್ದರೆ ನಿನ್ನ ಹಣ ಕೊಡಲ್ಲ ಹೋಗೆ ಎಂಬ ಏಕವಚನದಲ್ಲಿ ಸಂಬೋಧಿಸುವ ಅಹಂಕಾರಿ ಅಧಿಕಾರಿಗೆ ಹಿರಿಯ ಜೀವದ ಬಗ್ಗೆ ಒಂಚಿತ್ತು ಕನಿಕರವಿಲ್ಲ…
ಮಗ ನನಗೆ ತಿಳಿಸದೇ ಲೋನ್ ಮಾಡಿದ್ದಾನೆ ನನಗೆ ಊಟಕ್ಕೂ ಗತಿಯಿಲ್ಲ ದಯವಿಟ್ಟು ನನ್ನ ಎಂಟು ತಿಂಗಳ ವೃದ್ದಾಪ್ಯ ವೇತನವನ್ನು ಬಿಡಿಸಿಕೊಳ್ಳಲು ಅವಕಾಶ ನೀಡಿ ಎಂದು ಹಿರಿಯ ಜೀವ ಅಂಗಲಾಚಿದರೆ ” ಹೊಟ್ಟೆಗೆ ಇಲ್ಲದಿದ್ದರೆ ಎಲ್ಲಾದರೂ ಹೋಗಿ ಸಾಯಿ ” ಎಂದು ಹೇಳುವ ದುರಹಂಕಾರಿ ಮ್ಯಾನೇಜರ್ ಗೆ ಬಡವರ ಹಸಿವಿನ ಬಗ್ಗೆ ಅರಿವಿದೆಯ….!??
ಇಂತಹ ಕಣ್ಣಿನಂಚಿನಲ್ಲಿ ರಕ್ತವಿಲ್ಲದ ಅಧಿಕಾರಿಗಳು ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಮುಂದುವರೆದರೆ ಮುಂದೊಂದು ದಿನ ಬ್ಯಾಂಕ್ ಗಳಲ್ಲಿ “ಶ್ರೀಮಂತರಿಗೆ ಮಾತ್ರ ಪ್ರವೇಶ” ಎಂಬ ಬೋರ್ಡ್ ಬಿದ್ದರೂ ಅಚ್ಚರಿಯಿಲ್ಲ..!?
ಒಟ್ಟಾರೆಯಾಗಿ ಸಾವಿರಾರು ಕೋಟಿ ಸಾಲ ಮಾಡಿ ದೇಶ ತೊರೆದ ಶ್ರೀಮಂತರಿಗೆ , ಸಾಲ ಮನ್ನಾ ಮಾಡಿಸಿಕೊಳ್ಳುವ ಕಳ್ಳಕಾಕರಿಗೆ ರತ್ನಗಂಬಳಿ ಹಾಕುವ ಬಿಳಿಯಾನೆಂತಹ ಅಧಿಕಾರಿಗಳಿಗೆ ಧಿಕ್ಕಾರವಿರಲಿ… ವಯಸ್ಸಿಗೆ ಬೆಲೆ ಕೊಡದೇ ಏಕವಚನದಲ್ಲಿ ವೃದ್ದೆಗೆ ಬೈಯ್ಯುವ ಇಂತಹ ಬಡವರ ವಿರೋಧಿ ಅಧಿಕಾರಿಗಳ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply