ಕೆಲವರಿಗೆ ತಮ್ಮ ಗುರಿಯ ಬಗ್ಗೆ ಅಚಲವಾದ ಹಠವಿರುತ್ತದೆ. ಎಷ್ಟೇ ಕಷ್ಟ ಬಂದರೂ “ಬಿಟ್ಟುಕೊಡಬೇಡ” ಎಂಬ ಅಚಲ ಉತ್ಸಾಹವಿರುತ್ತದೆ. ಇಂತಹ ದೃಢ ಸಂಕಲ್ಪಕ್ಕೆ K. ಜಯಗಣೇಶ್ ಅತ್ಯುತ್ತಮ ಉದಾಹರಣೆ. ಲಕ್ಷಾಂತರ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಅವರು ನೆಚ್ಚಿನ ಐಎಎಸ್ ಸ್ಪೂರ್ತಿದಾತರಾಗಿದ್ದಾರೆ. ಅವರ ಸವಾಲುಗಳು ಮತ್ತು ವಿಜಯಗಳ ಸಂಪೂರ್ಣ ವಿವರ ಇಲ್ಲಿದೆ.
ನಮ್ಮ ದೇಶದಲ್ಲಿ ನಾಗರಿಕ ಸೇವಾ ಹುದ್ದೆಗಳು ದೂರದಿಂದ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕವಾಗಿ ಕಾಣಿಸಬಹುದು. ಈ ಹುದ್ದೆಗಳಲ್ಲಿರುವವರನ್ನು ನೋಡಿ ಹೆಮ್ಮೆ ಪಡಬಹುದು, ನಾನೂ ಆ ಸ್ಥಾನಕ್ಕೆ ಹೋಗಬೇಕು ಎಂದುಕೊಳ್ಳಬಹುದು. ಆದರೆ, ಆ ಸ್ಥಾನಗಳನ್ನು ತಲುಪಲು ಅಸಾಧಾರಣ ಪರಿಶ್ರಮ ಮತ್ತು ಉತ್ತಮ ಕಾರ್ಯತಂತ್ರದ ಅಧ್ಯಯನ ಅಗತ್ಯ. ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಮಾಡುವ ಈ ಪಯಣ, ಹುದ್ದೆ ಸಿಕ್ಕಾಗ ಆಗುವ ಸಂತೋಷದಷ್ಟೇ ಸುಲಭವಲ್ಲ. ನೀವು ಸಹ ಯುಪಿಎಸ್‌ಸಿ ಆಕಾಂಕ್ಷಿಗಳಾಗಿದ್ದರೆ, ಒಮ್ಮೆ ನಿಮ್ಮ ಜರ್ನಿ ಮತ್ತು ದೈನಂದಿನ ದಿನಚರಿಯ ಬಗ್ಗೆ ಯೋಚಿಸಿ ನೋಡಿ. ಅಥವಾ ನಿಮ್ಮೊಂದಿಗೆ ಓದಿ ಸರ್ಕಾರಿ ಸೇವೆಗೆ ಸೇರಿದವರೊಬ್ಬರ ಪಯಣವನ್ನು ಮೆಲುಕು ಹಾಕಿ.
ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದರೂ, ಕೇವಲ ಸಾವಿರಾರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. ಅದರಲ್ಲೂ ಕೆಲವರು ತಮ್ಮ ಬಡತನ ಮತ್ತು ಕಠಿಣ ಆರ್ಥಿಕ ಪರಿಸ್ಥಿತಿಗಳ ನಡುವೆಯೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳಾಗುತ್ತಾರೆ. ಇಂತಹವರೇ ಯುವ ಪೀಳಿಗೆಗೆ ನಿಜವಾದ ಮಾದರಿ, ಆದರ್ಶ ಮತ್ತು ಸ್ಫೂರ್ತಿಯಾಗುತ್ತಾರೆ.
ಇಂತಹ ಅಸಾಮಾನ್ಯ ಅಭ್ಯರ್ಥಿಗಳಲ್ಲಿ, ಇಂದಿನ ಲೇಖನದಲ್ಲಿ ನಾವು ಹೋಟೆಲ್‌ನಲ್ಲಿ ಮಾಣಿ (Hotel Waiter) ಆಗಿ ಕೆಲಸ ಮಾಡಿದ, ತನ್ನ ತಾಳ್ಮೆ ಮತ್ತು ಛಲವನ್ನು ಬಿಡದೆ ಬರೋಬರಿ 7 ಬಾರಿ ಪರೀಕ್ಷೆ ಬರೆದು, ಕೊನೆಯ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿದ ಕೆ. ಜಯಗಣೇಶ್ ಅವರನ್ನು ಪರಿಚಯಿಸುತ್ತಿದ್ದೇವೆ.
2008ರ ಬ್ಯಾಚ್‌ನ ಕೆ. ಜಯಗಣೇಶ್ ಅವರು ಅಖಿಲ ಭಾರತ 156ನೇ ರ‍್ಯಾಂಕ್‌ನೊಂದಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದರು. ಅವರು 6 ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲರಾದರೂ, ತಮ್ಮ ಛಲ ಬಿಡದೆ 7ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಗೆದ್ದರು.
ಕೆ. ಜಯಗಣೇಶ್ ಅವರ ಹಿನ್ನೆಲೆ:
ಜಯಗಣೇಶ್ ಬಡ ಕುಟುಂಬದ ಯುಪಿಎಸ್‌ಸಿ ಆಕಾಂಕ್ಷಿ. ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದವರು. ಅವರ ತಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರ ದುಡಿಮೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಯಗಣೇಶ್‌ಗೆ ಯುಪಿಎಸ್‌ಸಿ ಸಿದ್ಧತೆಗೆ ಸಹಾಯ ಮಾಡುವುದು ಅಸಾಧ್ಯವಾಗಿತ್ತು. ಇಂತಹ ಕಷ್ಟಗಳ ನಡುವೆಯೂ ಅವರು “ನೆವರ್ ಗಿವ್ ಅಪ್” ಮನೋಭಾವದಿಂದ ತಮ್ಮ ಯುಪಿಎಸ್‌ಸಿ ಪಯಣವನ್ನು ಮುಂದುವರೆಸಿದರು.
ಕೇಂದ್ರ ಗುಪ್ತಚರ ಇಲಾಖೆ ಹುದ್ದೆಗೆ ಆಯ್ಕೆ:
ಯುಪಿಎಸ್‌ಸಿ ಪರೀಕ್ಷೆಯ ತಮ್ಮ ಕೊನೆಯ ಪ್ರಯತ್ನದಲ್ಲಿದ್ದಾಗಲೇ, ಜಯಗಣೇಶ್ ಇಂಟೆಲಿಜೆನ್ಸ್ ಬ್ಯೂರೋ ಪರೀಕ್ಷೆ ಬರೆದು ಅದರಲ್ಲಿ ಆಯ್ಕೆಯಾಗಿದ್ದರು. ಈ ಸಮಯದಲ್ಲಿ, ಈ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಅಥವಾ ಯುಪಿಎಸ್‌ಸಿ ಪರೀಕ್ಷೆಯ ಕೊನೆಯ ಪ್ರಯತ್ನವನ್ನು ಮುಂದುವರಿಸಬೇಕೇ ಎಂಬ ಗೊಂದಲದಲ್ಲಿ ಅವರು ಸಿಲುಕಿದ್ದರು. ಅಂತಿಮವಾಗಿ, ಅವರು ಸಿಎಸ್‌ಇ ಪರೀಕ್ಷೆಯನ್ನೇ ಆಯ್ಕೆ ಮಾಡಿಕೊಂಡರು ಮತ್ತು 2008ರಲ್ಲಿ ದೇಶದ ಅತಿ ಕಠಿಣ ಪರೀಕ್ಷೆಯಲ್ಲಿ ಜಯ ಸಾಧಿಸಿದರು.
ಜಯಗಣೇಶ್ ಅವರ ವಿದ್ಯಾಭ್ಯಾಸ:
ಜಯಗಣೇಶ್ ತಮ್ಮ ಶಾಲಾ ಶಿಕ್ಷಣವನ್ನು ತಮ್ಮ ಗ್ರಾಮದಲ್ಲಿಯೇ ಪಡೆದರು. ಪ್ರೌಢಶಿಕ್ಷಣದ ನಂತರ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದರು. ತಂತಿ ಪೆರಿಯಾರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದರು. ಈ ಎರಡು ಡಿಗ್ರಿಗಳು ಅವರಿಗೆ ಒಂದು ಗೌರವಾನ್ವಿತ ಕೆಲಸ ಪಡೆಯಲು ನೆರವಾಗಲಿಲ್ಲ.
ಬಿಇ ನಂತರ ಹಲವು ಕೆಲಸಗಳೊಂದಿಗೆ ಯುಪಿಎಸ್‌ಸಿ ಸಿದ್ಧತೆ:
ಬಿಇ ಪದವಿ ನಂತರ, ಅವರು ಸಿನಿಮಾ ಥಿಯೇಟರ್‌ನಲ್ಲಿ ಬಿಲ್ಲಿಂಗ್ ಕ್ಲರ್ಕ್ ಹುದ್ದೆಗೆ ಸೇರಲು ನಿರ್ಧರಿಸಿದರು. ಇದರೊಂದಿಗೆ, ಹೋಟೆಲ್‌ನಲ್ಲಿ ಮಾಣಿ ಆಗಿಯೂ ಕೆಲಸ ಮಾಡಲು ಪ್ರಾರಂಭಿಸಿದರು. ಈ ಕೆಲಸಗಳಿಂದ ಅವರಿಗೆ ನಿರೀಕ್ಷಿತ ಆದಾಯ ಸಿಗಲಿಲ್ಲ. ಇಷ್ಟು ಕಡಿಮೆ ಹಣದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದು ಅರಿತುಕೊಂಡರು. ಜೊತೆಗೆ, ಅವರು ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಆದ ಕಾರಣ, ಈ ಎಲ್ಲಾ ಕೆಲಸಗಳಿಗೆ ವಿದಾಯ ಹೇಳಿ, ತಮ್ಮ ಕನಸಿನ ಹುದ್ದೆಯ ಕಡೆಗೆ ಸಂಪೂರ್ಣವಾಗಿ ಗಮನಹರಿಸಿದರು. ಸತತ 6 ಬಾರಿ ವಿಫಲರಾದರೂ ಸಹ, ತಮ್ಮ ಗುರಿಯ ಮೇಲಿನ ಉತ್ಸಾಹವನ್ನು ಕಳೆದುಕೊಳ್ಳದೆ, 7ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದರು.
ಅವರ ಯುಪಿಎಸ್‌ಸಿ ಪಯಣವು ಖಂಡಿತವಾಗಿಯೂ ಅನೇಕ ಬಡ ಕುಟುಂಬಗಳಿಂದ ಬರುವವರಿಗೆ ಒಂದು ದೊಡ್ಡ ಸ್ಫೂರ್ತಿಯಾಗಿದೆ, ಅಲ್ಲವೇ?
Leave a Reply