ಶಿವಮೊಗ್ಗ: ರಾಗಿಗುಡ್ಡದ ಬಂಗಾರಪ್ಪನವರ ಕಾಲೋನಿಯಲ್ಲಿ ವಿಗ್ರಹಗಳ ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದಲ್ಲೇ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ:
ದೇವಸ್ಥಾನದ ವಿಗ್ರಹಗಳನ್ನು ಒದ್ದು ಹಾನಿ ಮಾಡಿರುವ ಘಟನೆಯಿಂದ ರೊಚ್ಚಿಗೆದ್ದ ಈಶ್ವರಪ್ಪ, ಕೂಡಲೇ ವಿವಾದಿತ ಸ್ಥಳದ ಎದುರಿಗಿರುವ ಒತ್ತುವರಿ ಕಟ್ಟಡವನ್ನು ಮಹಾನಗರ ಪಾಲಿಕೆಯವರು ಶೀಘ್ರದಲ್ಲಿ ತೆರವುಗೊಳಿಸಬೇಕು ಎಂದು ಸ್ಥಳದಲ್ಲಿಯೇ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದರು.
ಸೋಮವಾರ ಸಂಜೆಯೊಳಗೆ ತೆರವಿಗೆ ಭರವಸೆ:
ಆಯುಕ್ತ ಮಾಯಣ್ಣ ಗೌಡರು ಮೊಬೈಲ್‌ನಲ್ಲಿ ಪ್ರತಿಕ್ರಿಯಿಸಿ, ಸೋಮವಾರ ಸಂಜೆಯೊಳಗೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಕಟ್ಟಡ ತೆರವುಗೊಳಿಸದಿದ್ದರೆ, ಹಿಂದೂ ಸಂಘಟನೆಗಳು ಹಾಗೂ ರಾಷ್ಟ್ರಭಕ್ತರ ಬಳಗ ಮುಂದಿನ ದಾರಿಯನ್ನು ಹುಡುಕಿಕೊಳ್ಳುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.
ವಿಗ್ರಹ ದ್ವಂಸಗೊಳಿಸಿದವರ ಗಡಿಪಾರಿಗೆ ಆಗ್ರಹ:
ವಿಗ್ರಹಗಳನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ಘಟನೆಯ ಕುರಿತು ಸ್ಥಳೀಯ ನಿವಾಸಿ ಜಯಮ್ಮ ಅವರಿಂದ ಮಾಹಿತಿ ಪಡೆದ ನಂತರ, ಡಿವೈಎಸ್ಪಿ ಸಂಜು ಕುಮಾರ್ ಅವರಿಗೆ “ಹೋಮ್ ಗಾರ್ಡ್ ನಿಗ್ರಹ ದಳಕ್ಕೆ ಮೂರು ಜಿಲ್ಲೆಗಳನ್ನು ಸೇರಿಸಿ ಮಾಡಿದರಲ್ಲ, ಈಗ ಏನು ಮಾಡುತ್ತಿದ್ದಾರೆ? ಅವರು ಕ್ರಮ ಯಾಕೆ ಕೈಗೊಂಡಿಲ್ಲ? ಆರೋಪಿಗಳನ್ನು ಯಾಕೆ ಬಂಧಿಸಿಲ್ಲ?” ಎಂದು ಪ್ರಶ್ನಿಸಿದರು. ಸಂಜೆಯೊಳಗೆ ಎಲ್ಲಾ ಕಾರ್ಯಗಳು ಮುಗಿಯುತ್ತವೆ ಎಂದು ಡಿವೈಎಸ್ಪಿ ಭರವಸೆ ನೀಡಿದರೂ, ಈಶ್ವರಪ್ಪ ಭರವಸೆ ಈಡೇರದಿದ್ದರೆ ರಾಷ್ಟ್ರಭಕ್ತರ ಬಳಗ ಪ್ರತಿಭಟಿಸಲಿದೆ ಎಂದು ಸ್ಪಷ್ಟಪಡಿಸಿದರು.
ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸಹಾಯದ ಭರವಸೆ:
ಕ್ಷತಿಗೊಳಗಾದ ದೇವಸ್ಥಾನವನ್ನು ಹಾಗೆಯೇ ಬಿಡಬಾರದು, ಹೊಸದಾಗಿ ನಿರ್ಮಿಸೋಣ, ಅದಕ್ಕೆ ತಾನು ಸಹಾಯ ಮಾಡುವೆನೆಂದು ಈಶ್ವರಪ್ಪ ಭರವಸೆ ನೀಡಿದರು. ಇದಕ್ಕಾಗಿ ದೇವಸ್ಥಾನ ಸಮಿತಿ ರಚಿಸಲು ಸಲಹೆ ನೀಡಿದರು.
ಎಸ್.ಪಿ. ವಿರುದ್ಧ ಗರಂ:
ಸ್ಥಳಕ್ಕೆ ಆಗಮಿಸಿದ ಮಾಜಿ ಡಿಸಿಎಂ ಈಶ್ವರಪ್ಪ ಅವರು ಎಸ್.ಪಿ. ಸ್ಥಳದಲ್ಲಿ ಇಲ್ಲದಿರುವುದನ್ನು ನೋಡಿ ಡಿವೈಎಸ್ಪಿ ಸಂಜೀವ್ ಕುಮಾರ್ ಅವರಿಗೆ “ನಾವು ಬಂದರೆ ಎಸ್ಪಿ ಬರೋದಿಲ್ವಾ? ನಾವು ಬರ್ತೀರಂತ ಗೊತ್ತಿದ್ದರೂ ಬರಲಿಲ್ಲ ಯಾಕೆ?” ಎಂದು ಗರಂ ಆದರು.
ಇದನ್ನು ಓದಿ : ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್‌ಪ್ರೆಸ್‌ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
WhatsApp Number : 7795829207
Leave a Reply