ಶಿವಮೊಗ್ಗ: “ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೂಡಾ ಪ್ರಕರಣದಲ್ಲಿ 14 ನಿವೇಶನಗಳನ್ನು ಹಿಂತಿರುಗಿಸುವಂತಾಗಿದ್ದು ಬಿಜೆಪಿಯ ನಿರಂತರ ಹೋರಾಟದ ಫಲವಾಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುವಂತಾಗಿದ್ದು, ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ನಡೆಸಿದ ತಾರ್ಕಿಕ ಅಂತ್ಯದ ಹೋರಾಟವೇ ಆಗಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು
ಇಂದು ಶಿವಮೊಗ್ಗದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯಕರ್ತರಿಗೆ ಸ್ಪಷ್ಟವಾದ ಉದ್ದೇಶ ಮತ್ತು ಗುರಿ ಇದೆ ಎಂದು ಹೇಳಿದರು. “ಪಕ್ಷದ ಅನೇಕ ಹಿರಿಯರು, ಸಾವಿರಾರು ಕಾರ್ಯಕರ್ತರು ಬದ್ಧತೆಯಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಇದರ ಫಲವಾಗಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದು ಜನರ ಸೇವೆಯನ್ನು ಮಾಡುತ್ತಿದೆ” ಎಂದರು.
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ:
ಕಾಂಗ್ರೆಸ್ ಪಕ್ಷ ಅನುಕಂಪ ಮತ್ತು ಇತರೆ ಕಾರಣಗಳಿಂದ 67 ವರ್ಷ ದೇಶವನ್ನು ಆಳಿದೆ ಎಂದು ವಿಜಯೇಂದ್ರ ಟೀಕಿಸಿದರು. “ಇತರೆ ರಾಷ್ಟ್ರೀಯ ಪಕ್ಷಕ್ಕೂ ಬಿಜೆಪಿಗೂ ಇರುವ ವ್ಯತ್ಯಾಸವೆಂದರೆ, ಬಿಜೆಪಿ ಕಾರ್ಯಕರ್ತರಿಗೆ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ವಿಷಯದ ಬಗ್ಗೆ ಬದ್ಧತೆಯಿದೆ. ಇತರೆ ಪಕ್ಷಗಳಿಗೆ ಅಂತಹ ಯಾವ ಬದ್ಧತೆ, ಗುರಿ ಇಲ್ಲ” ಎಂದು ಅವರು ಪ್ರತಿಪಾದಿಸಿದರು.
ಸರ್ಕಾರದ ಆರ್ಥಿಕ ದುಃಸ್ಥಿತಿ:
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. “ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜರಾಯರೆಡ್ಡಿ ಅವರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂಬ ಹೇಳಿಕೆ ಇದಕ್ಕೆ ಸಾಕ್ಷಿ. ಅಭಿವೃದ್ಧಿ ಮತ್ತು ಅನುದಾನಗಳ ಕುರಿತು ಕಾಂಗ್ರೆಸ್ ಶಾಸಕರ ಹೇಳಿಕೆಗಳೇ ಸರ್ಕಾರದ ದುಃಸ್ಥಿತಿಯನ್ನು ಸಾರುತ್ತಿವೆ” ಎಂದರು.
ಜಾಹಿರಾತು:
ಸಿದ್ದರಾಮಯ್ಯ ಅವರನ್ನು “ಲಾಟರಿ ಮುಖ್ಯಮಂತ್ರಿ” ಎಂದು ಮತ್ತೊಬ್ಬ ಶಾಸಕರು ಹೇಳುತ್ತಾರೆ ಎಂದು ಲೇವಡಿ ಮಾಡಿದ ವಿಜಯೇಂದ್ರ, “ರಾಜ್ಯದ ಜನರಿಗೆ ಗ್ಯಾರಂಟಿ ಎಂದು ಮಂಕುಬೂದಿ ಎರಚಲಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಮ್ಮ ಜಿಲ್ಲೆಯ ಸಚಿವರಿಗೂ ಭಯವಿದೆ. ಅವರು ಮತ್ತೊಂದು ಕ್ಯಾಬಿನೆಟ್ನಲ್ಲಿ ಸಚಿವರಾಗಿ ಮುಂದುವರೆಯುವ ಬಗ್ಗೆ ಅನುಮಾನವಾಗಿದೆ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಮೋದಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ:
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಇದರ ಬಂಡವಾಳ ಬಯಲು ಮಾಡಬೇಕು ಎಂದು ವಿಜಯೇಂದ್ರ ಕರೆ ನೀಡಿದರು. “ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಸಕಾರಾತ್ಮಕ ಅಂಶಗಳು, ಅಭಿವೃದ್ಧಿಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಮೋದಿ ಅವರ ರಾಯಭಾರಿಯಂತೆ ಕೆಲಸ ಮಾಡಬೇಕು” ಎಂದು ಸೂಚಿಸಿದರು.
ಈ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಎಂ.ಎಲ್.ಸಿ ಎಸ್. ರುದ್ರೇಗೌಡ, ಡಿ.ಟಿ. ಮೇಘರಾಜ್ ಸೇರಿದಂತೆ ವಿವಿಧ ಜಿಲ್ಲೆಗಳ ಬಿಜೆಪಿ ಪ್ರಮುಖರು ಭಾಗವಹಿಸಿದ್ದರು.
ಇದನ್ನು ಓದಿ : ಒಮ್ಮೆಯಾದರೂ ಭೇಟಿ ನೀಡಲೇಬೇಕಾದ 11 ಪವಿತ್ರ ಜ್ಯೋತಿರ್ಲಿಂಗಗಳು! ಆಧ್ಯಾತ್ಮಿಕ ಭಾರತ ದರ್ಶನ – ಶಿವಮೊಗ್ಗ ಎಕ್ಸ್ಪ್ರೆಸ್ನ್ಯೂಸ್ ವಿಶೇಷ ವರದಿ! ಪೂರ್ತಿ ಓದಲು ಲಿಂಕ್ ಕ್ಲಿಕ್ ಮಾಡಿ
ಜಾಹಿರಾತು:
WhatsApp Number : 7795829207
Leave a Reply